ಕಲ್ಮಠದ ಪೀಠಾಧಿಕಾರಿ ಶಿವಲಿಂಗ ಸ್ವಾಮೀಜಿ ಲಿಂಗೈಕ್ಯ: ಶ್ರದ್ಧಾಂಜಲಿ
ಲೋಕದರ್ಶನ ವರದಿ
ಸವದತ್ತಿ 31: ಸ್ಥಳೀಯ ಕಲ್ಮಠದ ಪೀಠಾಧಿಕಾರಿ ಶಿವಲಿಂಗ ಮಹಾಸ್ವಾಮೀಜಿಯವರಿಗೆ ಮಾ.30ರಂದು ರಾತ್ರಿ ಜಮಖಂಡಿ ತಾಲೂಕು ಬಿದರಿಯಲ್ಲಿ ಹೃದಯಾಘಾತವಾಗಿ ತಮ್ಮ 62ನೇ ವಯಸ್ಸಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಅಗಲಿಕೆಗೆ ತಾಲೂಕಿನ ಮಠಾಧೀಶರು, ಗಣ್ಯರು ಮತ್ತು ಭಕ್ತರು ಕಂಬನಿ ಮಿಡಿದಿದ್ದಾರೆ.
ಶ್ರೀಗಳು ಬಿದರಿ ಮತ್ತು ಸವದತ್ತಿಯ ಕಲ್ಮಠಕ್ಕೆ ಪೀಠಾಧಿಕಾರಿಗಳಾಗಿದ್ದು, ಉಭಯ ಮಠಗಳಲ್ಲಿ ಧಾರ್ಮಿಕ ಆಚರಣೆಗಳು ಇವರ ನೇತೃತ್ವದಲ್ಲಿ ನಡೆಯುತ್ತಿದ್ದವು. ಗುರುವಾರದಂದು ರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿದರಿಯಿಂದ ಜಮಖಂಡಿಯ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಮರೆಗುದ್ದಿಯಲ್ಲಿ ಶ್ರೀಗಳು 1-10-1961ರಂದು ಶರಣ ಬಸಲಿಂಗಯ್ಯ ಹಾಗೂ ದ್ರಾಕ್ಷಾಯಣಿಯವರ ಉದರದಲ್ಲಿ ಜನಿಸಿದ್ದರು. ಶ್ರೀಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಕಲಾ ವಿಭಾಗದಲ್ಲಿ ಪಿಯುಸಿ ಸೇರಿದಂತೆ ಬಿಎ ಪದವಿಯನ್ನು ಸವದತ್ತಿಯಲ್ಲಿಯೇ ಮುಗಿಸಿದ್ದಾರೆ. ಧಾರ್ಮಿಕತೆಯ ಭಾವನೆಗಳೊಂದಿಗೆ ಸವದತ್ತಿಯ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಶ್ರೀಗಳು ತಮ್ಮ 62ನೇ ವಯಸ್ಸಿನಲ್ಲಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಶ್ರೀಮಠದ ಭಕ್ತರಿಗೆ ಅಪಾರ ನೋವುಂಟಾಗಿದೆ.
ಸವದತ್ತಿಯ ಕಲ್ಮಠಕ್ಕೆ ಪೀಠಾಧಿಕಾರಿಗಳಾದ ನಂತರ ಶ್ರೀಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವದರ ಜೊತೆಗೆ ಶ್ರೀಮಠದ ಅಭಿವೃದ್ದಿಯನ್ನು ಮಾಡಿ ಸಕಲ ಭಕ್ತ ಸಂಕುಲಕ್ಕೆ ಸನ್ಮಾರ್ಗವನ್ನು ನೀಡುತ್ತಿದ್ದರು. ಸವದತ್ತಿಗಷ್ಟೆ ಮೀಸಲಾಗದೆ ಬಿದರಿ ಮತ್ತು ಗುಲಗಾಲ ಜಂಬಗಿಯ ಮಠಗಳಲ್ಲಿ ಬಸವಾದಿ ಶಿವಶರಣರು ಸಮಾಜಕ್ಕೆ ನೀಡಿದ ಚಿಂತನೆಗಳನ್ನು ಪ್ರವಚನ ಮೂಲಕ ಸಮಾಜಕ್ಕೆ ನೀಡಿ ಸಮಾಜದ ಸ್ವಾಸ್ಥ್ಯಕ್ಕೆ ಕಾರಣರಾಗಿದ್ದರು. ಸರಳ ಸ್ವಭಾವ, ಸಾದಾ ಜೀವನ, ಸಹೃದಯತೆಯಿಂದ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು.
ಶುಕ್ರವಾರ ಮುಂಜಾನೆ ಸವದತ್ತಿಯ ಕಲ್ಮಠದಲ್ಲಿ ಭಕ್ತರೆಲ್ಲರೂ ಸೇರಿ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಪೂಜ್ಯರ ಅಂತಿಮ ಸಂಸ್ಕಾರವನ್ನು ಬಿದರಿಯ ಶ್ರೀಮಠದಲ್ಲಿ ಶುಕ್ರವಾರದಂದು ಸಂಜೆ ನೆರವೇರಿಸುವ ಹಿನ್ನೆಲೆಯಿಂದ ಸವದತ್ತಿಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಿದರಿಗೆ ಹೋಗಿ ಪೂಜ್ಯರ ಪಾದಗಳಿಗೆ ಅಂತಿಮ ನಮನ ಸಲ್ಲಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಪ್ರಭುನವರ, ಡಾ.ಎನ್.ಸಿ.ಬೆಂಡಿಗೇರಿ, ಐ.ಪಿ.ಪಾಟೀಲ, ಸಿ.ಬಿ.ದೊಡಗೌಡರ, ಸೋಮು ಹದ್ಲಿ, ಆನಂದ ಜಾನವೇಕರ, ಸುರೇಶ ಬಾಳೋಜಿ, ಮಲ್ಲು ಬೀಳಗಿ, ಅನೀಲ ಸುಣಗಾರ ಬಸವರಾಜ ಗುರಣ್ಣವರ, ರಾಮಣ್ಣ ಈಳಿಗೇರ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.