ಶೀಗಿ ಹುಣ್ಣಿಮೆ ಜಾತ್ರೆ : ಹರಿದು ಬರಲಿದೆ ಯಲ್ಲಮ್ಮನ ಗುಡ್ಡಕ್ಕೆ ಭಕ್ತರ ದಂಡು
ಉಗರಗೋಳ 27: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶನಿವಾರ ಅ.28ರಂದು ಶೀಗಿ ಹುಣ್ಣಿಮೆ ಅಂಗವಾಗಿ ಬೃಹತ್ ಜಾತ್ರೆ ನಡೆಯಲಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ದಂಡು ಏಳುಕೊಳ್ಳದ ನಾಡಿನತ್ತ ಹರಿದುಬರಲಿದೆ.
ಉತ್ತರ ಕರ್ನಾಟಕದಲ್ಲಿ ಶೀಗಿ ಹುಣ್ಣಿಮೆ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಹುಣ್ಣಿಮೆ ದಿನ ರೈತರು ತಮ್ಮ ಹೊಲದಲ್ಲಿ ಭೂತಾಯಿಗೆ ಪೂಜಿಸುವ ಜತೆಗೆ, ಯಲ್ಲಮ್ಮನಗುಡ್ಡಕ್ಕೆ ಅಪಾರ ಪ್ರಮಾಣದಲ್ಲಿ ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಅವರಿಗೆ ಅಗತ್ಯ ಮೂಲಸೌಕರ್ಯ ಒದಗಿಸುತ್ತೇವೆ. ಸುಲಭವಾಗಿ ದೇವಿ ದರ್ಶನ ಪಡೆಯಲು ಅನುಕೂಲವಾಗಲೆಂದು ಕ್ಯೂಲೈನ್ ವ್ಯವಸ್ಥೆ ಮಾಡಲಾಗುವುದು. ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುವುದು ಎಂದು ಯಲ್ಲಮ್ಮ ದೇವಿ ದೇವಸ್ಥಾನದ ಅಧಿಕಾರಿಗಳು ತಿಳಿಸಿದರು.
ಭೂಮಿಯೂ ಹದ: ಉಗರಗೋಳ, ಚಿಕ್ಕುಂಬಿ, ಚುಳಕಿ, ಹಂಚಿನಾಳ, ಹೂಲಿ, ಹರ್ಲಾಪುರ ಮತ್ತಿತರ ಗ್ರಾಮಗಳ ಹೊಲಗಳಲ್ಲಿ ಸಂಭ್ರಮದಿಂದ ಶೀಗಿ ಹುಣ್ಣಿಮೆ ಆಚರಣೆಗೆ ರೈತರು ಸಿದ್ಧವಾಗಿದ್ದಾರೆ. ಭೂಮಿ ಹದಗೊಳಿಸಿದ್ದು, ಚರಗ ಚೆಲ್ಲಲಿದ್ದಾರೆ. ಉತ್ತಮ ಮಳೆ-ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಿದ್ದಾರೆ.