ಬೆಳಗಾವಿ

ಗಡಿ ಭಾಗದಲ್ಲಿ ಬರ ಪರಿಸ್ಥಿತಿ ತೀವ್ರ: ಸರ್ಕಾರದ ವಿರುದ್ಧ ರೈತರ ಆಕ್ರೋಶ

ಗಡಿ ಭಾಗದಲ್ಲಿ ಬರ ಪರಿಸ್ಥಿತಿ ತೀವ್ರ: ಸರ್ಕಾರದ ವಿರುದ್ಧ ರೈತರ ಆಕ್ರೋಶ


 ಸಂಬರಗಿ, ಸೆ. 2: ಗಡಿ ಪ್ರದೇಶದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಂಡಿದ್ದು, ಮುಂಗಾರು ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಆದರೆ ರಾಜ್ಯ ಸರ್ಕಾರ ಈ ಭಾಗದ ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಸಂಬರಗಿ ಪಾಂಡೇಗಾಂವ್, ಶಿರೂರು, ಚಮಕೇರಿ, ಬೇವುನೂರು, ಬೀದರ್, ಹಟ್ಟಿ, ಕಲೊಟ್ಟಿ, ಶಿವನೂರು, ಖೋಟಾಳಡಿ, ಅನಂತಪುರ ಮತ್ತು ತೆಲಸಂಗ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಂತಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸುಮಾರು 40 ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಇದೆ.  

ರಾಜ್ಯದಲ್ಲಿ 140 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರ, ಬೆಳಗಾವಿ ಜಿಲ್ಲೆಯ ಒಂದೇ ಒಂದು ತಾಲೂಕನ್ನೂ ಬರಪೀಡಿತ ಎಂದು ಘೋಷಿಸಿಲ್ಲ. ಇದರಿಂದ ಸರ್ಕಾರದ ಗಮನ ಈ ಭಾಗದ ರೈತರ ಸಮಸ್ಯೆಗಳತ್ತ ಇಲ್ಲ ಎಂಬ ಆರೋಪ ಕೇಳಿಬಂದಿದೆ.  

ತಾಲೂಕು ಆಡಳಿತವು ಬರ ಪರಿಸ್ಥಿತಿಯ ಕುರಿತು ತಕ್ಷಣ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಬರ ಘೋಷಣೆ ಮಾಡದಿರುವುದರಿಂದ ರೈತರಿಗೆ ಸರ್ಕಾರದ ಪರಿಹಾರ ಹಾಗೂ ಇತರೆ ಸೌಲಭ್ಯಗಳು ಸಿಗುತ್ತಿಲ್ಲ. ಬಿತ್ತನೆ ಬೀಜ ಹಾಗೂ ಬೆಳೆಗಾಗಿ ಮಾಡಿದ ಖರ್ಚೂ ರೈತರಿಗೆ ಮರಳಿಲ್ಲ. ಗಡಿ ಭಾಗದ ಕೆರೆಗಳು ಕೂಡ ಬತ್ತಿಹೋಗಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.  

ಈ ಕುರಿತು ಬಿಜೆಪಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ನಿಂಗಪ್ಪ ಕೋಕಲೆ ಅವರನ್ನು ಸಂಪರ್ಕಿಸಿದಾಗ, ಬರಪೀಡಿತ ಪ್ರದೇಶದ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರೀಶೀಲಿಸಿರುವುದಾಗಿ ತಿಳಿಸಿದರು. ಪರಿಸ್ಥಿತಿ ಭೀಕರವಾಗಿದ್ದರೂ ಸರ್ಕಾರ ತಕ್ಷಣದ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ವತಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. 


ಸುದ್ದಿ ಓದಿ