ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿರುವೆ
ಸಚಿವ ಸಿ.ಸಿ.ಪಾಟೀಲ ಹೇಳಿಕೆ: ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ
ಸವದತ್ತಿ 06: ಯಡಿಯೂರಪ್ಪನವರ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನನ್ನನ್ನು ಕರೆದು ಮೊದಲ ಬಾರಿ ಮಂತ್ರಿ ಸ್ಥಾನವನ್ನು ನೀಡಿ ಅಂದು ಜವಾಬ್ದಾರಿ ಕೊಟ್ಟ ನಂತರ ಅದನ್ನು ಸರಿಯಾಗಿ ನಿಭಾಯಿಸಿದ ಅತ್ಮ ಸಂತೋಷ ನನಗಿದೆ. ಈಗ ಬೊಮ್ಮಾಯಿಯವರು ಸಹ ನನಗೆ ತಮ್ಮ ಮಂತ್ರಿ ಮಂಡಳದಲ್ಲಿ ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯದ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿರುವದಾಗಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಆಚಮಟ್ಟಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಡಿಯಲ್ಲಿ 2022-23ನೇ ಸಾಲಿನ ಲೆಕ್ಕ ಶಿರ್ಷಿಕೆ 5054 ರಾಜ್ಯ ಹೆದ್ದಾರಿ ಸುಧಾರಣೆ ಅಡಿಯಲ್ಲಿ ತಾಲೂಕಿನ ಸಿಂಧನೂರು ಹೆಮ್ಮಡಗಾ ರಸ್ತೆಯ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆ ಹಾಗೂ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾನ್ಯ ಮುಖ್ಯಮಂತ್ರಿಗಳು ಆಚಮಟ್ಟಿ ಗ್ರಾಮದೇವಿ ದೇವಸ್ಥಾನಕ್ಕೆ 1ಕೋಟಿ ರೂ.ಗಳನ್ನು ಹಾಗೂ ಕಲ್ಮೇಶ್ವರ ದೇವಸ್ಥಾನಕ್ಕೆ 25 ಲಕ್ಷ ರೂ.ಗಳನ್ನು ಹಾಗೂ ಆಚಮಟ್ಟಿಯಿಂದ ಚುಳಕಿ ಗ್ರಾಮದವರೆಗೆ ರಸ್ತೆ ಅಭಿವೃದ್ದಿಗೆ 10ಕೋಟಿ ರೂ.ಗಳ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದು, ಈ ಭಾಗದಲ್ಲಿ ಒಟ್ಟು 11.25ಕೋಟಿ ರೂ.ಗಳಲ್ಲಿ ಇಂದು ಅಭಿವೃದ್ದಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಅದರಂತೆ ಚುಳಕಿಯಿಂದ ಯಲ್ಲಮ್ಮನಗುಡ್ಡದವರೆಗೂ 9 ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ದಿಗೆ ಅನುನದಾನ ನೀಡಲಾಗಿದೆ ಎಂದರು. ಚುಳಕಿ ಸಿದ್ದರಾಮ ಅಜ್ಜನವರ ಆಶೀರ್ವಾದದಿಂದ ಇಂದು ನಮ್ಮ ಕುಟುಂಬ ಸಾಕಷ್ಟು ಉನ್ನತಿಯಯನ್ನು ಕಂಡಿದ್ದು, ಶ್ರೀ ಗವಿಮಠಕ್ಕೆ ಮಠಕ್ಕೆ 1ಕೋಟಿ ರೂ., ಹೂಲಿ ಮಠಕ್ಕೆ 1ಕೋಟಿ ರೂ.ಗಳ ಅನುದಾನವನ್ನು ನೀಡಿ ಧಾರ್ಮಿಕ ಪರಂಪರೆಯ ಕುರುಹುಗಳ ಅಭಿವೃದ್ದಿಗೆ ಸಹಕಾರ ನೀಡಲಾಗಿದೆ ಎಂದರು. ಲೋಕೋಪಯೋಗಿ ಸಚಿವನಾದ ಮೇಲೆ ಎಸ್.ಸಿ.ಪಿ.ಟಿ.ಎಸ್ ಯೋಜನೆಯಡಿ 900 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಸವದತ್ತಿ ತಾಲೂಕಿಗೆ ಬರುವಂತ ದಿನಗಳಲ್ಲಿ 30 ಕೋಟಿ ರೂ.ಗಳ ಅನುದಾನವನ್ನು ನೀಡುವದಾಗಿ ಭರವಸೆ ನೀಡಿದರು.
ಯರಗಟ್ಟಿಯಿಂದ ನರಗುಂದ ಮಾರ್ಗವಾಗಿ ಗಜೇಂದ್ರಗಡಕ್ಕೆ ಸೇರುವ ರಾಜ್ಯ ಹೆದ್ದಾರಿಯನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು.
ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ಸಮಾಜ ಮುಖಿಯಾಗಿ ನಾವು ನಮ್ಮ ಕರ್ತವ್ಯವನ್ನು ಅರಿತುಕೊಂಡು ಕೆಲಸ ಮಾಡಬೇಕಿದ್ದು, ಸಿ.ಸಿ.ಪಾಟೀಲರು ಲೋಕೋಪಯೋಗಿ ಇಲಾಖೆಯಿಂದ ಸವದತ್ತಿ ಯಲ್ಲಮ್ಮಾ ಮತ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿ ಅಭಿವೃದ್ದಿಗೆ ಸಹಕಾರ ನೀಡುತ್ತಿದ್ದಾರೆ ಎಂದರು. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಮತಕ್ಷೇತ್ರಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವದಾಗಿ ಹೇಳಿದರು. 100 ಕೋಟಿ ರೂ.ಗಳ ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯಲ್ಲಿನ ಜನರಿಗೆ ನಿರಂತರ ಕುಡಿಯುವ ನೀರು ಪೂರೈಕೆಗೆ ಕೂಡಲೆ ಚಾಲನೆ ನೀಡಲಾಗುತ್ತಿದೆ ಎಂದರು.
ಕಾರ್ಯನಿರ್ವಾಹಕ ಅಭಿಯಂತರ, ಎಸ್.ಎಸ್.ಸೊಬರದ, ಪಿಡಬ್ಲೂಡಿ ಇಂಜನೀಯರ ಎಚ್.ಎ.ಕದರಾಪುರ, ತಾ.ಪಂ ಇಓ ಯಶವಂತಕುಮಾರ, ಆಣ್ಣಪ್ಪಗೌಡ ಪಾಟೀಲ, ಗ್ರಾಂ.ಪಂ ಅಧ್ಯಕ್ಷೆ ಶೋಭಾ ರವಿ ಜಮುಖಂಡಿ, ಉಪಾದ್ಯಕ್ಷ ರಾಯನಗೌಡರ, ಜಗದೀಶ ಕೌಜಗೇರಿ ಉಪಸ್ಥಿತರಿದ್ದರು.