ಪುಟಿದೆದ್ದ ಸೆನ್ಸೆಕ್ಸ್ : 835.06 ಅಂಕ ಏರಿಕೆ
ಮುಂಬೈ, ಸೆ 25 : ಎಲ್ಲ ವಲಯಗಳ ಷೇರುಗಳಿಗೆ ಉತ್ತಮ ಖರೀದಿ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ಆರು ವಹಿವಾಟು ದಿನಗಳಲ್ಲಿ ಕಂಡಿದ್ದ ನಷ್ಟದ ಹೊರತಾಗಿಯೂ ಮುಂಬೈ ಷೇರು ವಿನಿಮಯ ಕೇಂದ್ರ( ಬಿಎಸ್ಇ) ದ ಸೂಚ್ಯಂಕ ಸೆನ್ಸೆಕ್ಸ್, ಶುಕ್ರವಾರ ದಿನದ ವಹಿವಾಟಿನ ಅಂತ್ಯಕ್ಕೆ 835.06 ಅಂಕ ಏರಿಕೆ ಕಂಡು 37,388.66ಕ್ಕೆ ತಲುಪಿದೆ.ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿಸಹ 244.70 ಅಂಕ ಏರಿಕೆ ಕಂಡು 11,050.25ರಲ್ಲಿತ್ತು.
ಕಳೆದ ಆರು ವಹಿವಾಟು ದಿನಗಳಲ್ಲಿ 2747 ಅಂಕ ಕುಸಿತ ಕಂಡಿದ್ದ ಸೆನ್ಸೆಕ್ಸ್ ಶುಕ್ರವಾರ ಸಕಾರಾತ್ಮಕವಾಗಿ ವಹಿವಾಟು ಆರಂಭಿಸಿತು. ದಿನದ ಒಂದು ಹಂತದಲ್ಲಿ ಗರಿಷ್ಠ 918 ಅಂಕ ಏರಿಕೆ ಕಂಡು 37,471.17 ಕ್ಕೆ ತಲುಪಿತ್ತು. ದಿನದ ಅಂತ್ಯಕ್ಕೆ 835.06 ಅಂಕ ಏರಿಕೆ ಕಂಡು 37,388.66ರಲ್ಲಿತ್ತು.
ಸೆನ್ಸೆಕ್ಸ್ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 37,471.17 ಮತ್ತು 36,730.52ರಲ್ಲಿತ್ತು. ನಿಫ್ಟಿ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 11,072.60 ಮತ್ತು 10,854.85 ರಲ್ಲಿತ್ತು.
ವಲಯ ಸೂಚ್ಯಂಕಗಳಾದ ದೂರಸಂಪರ್ಕ,ತಂತ್ರಜ್ಞಾನ, ಆಟೋ, ಕೈಗಾರಿಕೆ ಮತ್ತು ಲೋಹ ಷೇರುಗಳು ಮಾರುಕಟ್ಟೆಯನ್ನು ಏರಿಕೆಗೆ ಕಾರಣವಾಗಿವೆ. ಪ್ರಮುಖ ಷೇರುಗಳ ಪೈಕಿ ಬಜಾಜ್ ಫೈನಾನ್ಸ್, ಎಚ್ಸಿಎಲ್ ಟೆಕ್ನಾಲಜೀಸ್, ಭಾರ್ತಿ ಏರ್ಟೆಲ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಎಲ್ ಆಂಡ್ ಟಿ ಮಾರುಕಟ್ಟೆ ಏರಿಕೆಗೆ ಬೆಂಬಲಿಸಿವೆ.
ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ ಎಲ್ಲವೂ ಸಕಾರಾತ್ಮಕವಾಗಿ ವಹಿವಾಟು ಕೊನೆಗೊಳಿಸಿವೆ.