ಸೆನ್ಸೆಕ್ಸ್ 65.66 ಅಂಕ ಕುಸಿತ
ಮುಂಬೈ ಸೆ 23 : ಇಂಧನ, ದೂರಸಂಪರ್ಕ ಮತ್ತು ಆರೋಗ್ಯ ರಕ್ಷಣೆ ಷೇರುಗಳು ಮಾರಾಟ ಒತ್ತಡದಿಂದ ಸೆನ್ಸೆಕ್ಸ್ ಸತತ ಐದನೇ ವಹಿವಾಟು ದಿನವಾದ ಬುಧವಾರವೂ ಇಳಿಮುಖ ಕಂಡಿದ್ದು, ದಿನದ ಅಂತ್ಯಕ್ಕೆ 65.6 ಅಂಕ ಕುಸಿತ ಕಂಡು 37,668.42ಕ್ಕೆ ಇಳಿದಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 21.80 ಅಂಕ ಇಳಿಕೆ ಕಂಡು 11,131.85ರಲ್ಲಿತ್ತು. ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 390 ಏರಿಕೆ ಕಂಡು 38,124.94ಕ್ಕೆ ತಲುಪಿತ್ತು. ಒಂದು ಹಂತದಲ್ಲಿ 406 ಅಂಕ ಏರಿಕೆಯೊಂದಿಗೆ ದಿನ ಗರಿಷ್ಠ ಮಟ್ಟವಾದ 38,140ರಲ್ಲಿತ್ತು. ನಂತರ 421 ಅಂಕ ಇಳಿಕೆ ಕಂಡು ದಿನದ ಕನಿಷ್ಠ ಮಟ್ಟವಾದ 37,313.09ಕ್ಕೆ ಕುಸಿದಿತ್ತು.
ಕೊನೆಗೆ ವಹಿವಾಟು ಮುಗಿಸುವಾಗ 65.66 ಅಂಕ ಇಳಿಕೆ ಕಂಡು 37,668.42ರಲ್ಲಿತ್ತು. ಸೆನ್ಸೆಕ್ಸ್, ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 38,140.07 ಮತ್ತು 37,313.09ರಲ್ಲಿತ್ತು. ನಿಫ್ಟಿ, ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 11,259.55 ಮತ್ತು 11,024.40 ರಲ್ಲಿತ್ತು. ವಲಯ ಸೂಚ್ಯಂಕಗಳಾದ ಇಂಧನ, ದೂರಸಂಪರ್ಕ, ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆ ಷೇರುಗಳು ಮಾರುಕಟ್ಟೆ ಏರಿಕೆಯನ್ನು ತಡೆದಿವೆ. ಭಾರ್ತಿ ಏರ್ ಟೆಲ್, ಟಾಟಾ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್, ಎನ್ ಟಿಪಿಸಿ ಮತ್ತು ಪವರ್ ಗ್ರಿಡ್ ಕುಸಿತ ಪ್ರಮುಖ ಷೇರುಗಳಾಗಿದ್ದು, ಆಕ್ಸಿಸ್ ಬ್ಯಾಂಕ್, ಹಿಂದ್ ಯುನಿಲಿವರ್, ಇನ್ಫೋಸಿಸ್, ನೆಸ್ಲೆ ಇಂಡಿಯಾ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಮತ್ತಷ್ಟು ನಷ್ಟವನ್ನು ತಡೆದಿವೆ ಎಂದು ಮಾರುಕಟ್ಟೆ ಮಧ್ಯವರ್ತಿಗಳು ತಿಳಿಸಿದ್ದಾರೆ.ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 18 ಇಳಿಕೆ ಕಂಡರೆ, 12 ಕಂಪೆನಿಗಳ ಷೇರುಗಳು ಏರಿಕೆ ಕಂಡಿವೆ.