ಹಿರಿಯ ಸಂಶೋಧಕ ಡಾ. ಶಿ.ಬಾ. ಪಾಟೀಲ ವಿಧಿವಶ
ಸಂಕೇಶ್ವರ 24: ಗಡಿ ಭಾಗದ ಹಿರಿಯ ಸಂಶೋಧಕ ಡಾ. ಶಿವನಗೌಡ ಬಾಳಗೌಡ ಪಾಟೀಲ (83) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅವರು ರಟ್ಟರ ಕಾಲದ ಸಂಸ್ಕೃತಿ ಅಧ್ಯಯನ ಪ್ರಬಂಧಕ್ಕೆ ಪಿ.ಎಎಚ್.ಡಿ ಪಡೆದಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಪಿ.ಎಚ್.ಡಿ ಪದವಿ ಪಡೆದಿದ್ದು ಇಡೀ ದಕ್ಷಿಣ ಭಾರತದಲ್ಲಿ ಪ್ರಥಮ ಎನ್ನಲಾಗಿತ್ತು. ಕೂಹುಂಡಿ ನಾಡು, ನಾಣ್ಯಗಳ ಇತಿಹಾಸ, ಶ್ರೀ ಕ್ಷೇತ್ರ ಸೊಗಲ ದರ್ಶನ, ದುಂಡೀಶನ ವಚನಗಳು ಮುಂತಾದ ಐತಿಹಾಸಿಕ ಮತ್ತು ಸಾಹಿತ್ಯಕ ಕೃತಿಗಳನ್ನು ಬರೆದಿದ್ದರು. ಇದಲ್ಲದೆ ಪಠ್ಯರಚನಾ ಸಮಿತಿಯ ಸದಸ್ಯರಾಗಿ ಅನುಪಮ ಸೇವೆ ಸಲ್ಲಿಸಿದ್ದರು.
ಸಂಕೇಶ್ವರ ಹತ್ತಿರದ ಅರ್ಜುನವಾಡದಲ್ಲಿ ಬಸವೇಶ್ವರರ ಬಗೆಗೆ ಇದ್ದ ಶಿಲಾ ಶಾಸನವೊಂದನ್ನು ಅವರು ಸಂಶೋಧಿಸಿದ್ದರು. ಹುಕ್ಕೇರಿಯಲ್ಲಿ ಜರುಗಿದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯು ಅವರು ಕಾರ್ಯ ನಿರ್ವಹಿಸಿದ್ದರು. ಕೂಡಲ ಸಂಗದಮದ ಬಸವಧರ್ಮ ಪೀಠದ ಸದಸ್ಯರಾಗಿ, ರಾಷ್ಟ್ರೀಯ ಬಸವ ದಳದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಅವರು ಅನುಪಮ ಸೇವೆ ಸಲ್ಲಿಸಿದ್ದರು.
ಸಂಕೇಶ್ವರ ಪಟ್ಟಣದಲ್ಲಿ ಬಸವ ಮಂಟಪ ಸ್ಥಾಪಿಸಿ ಪ್ರತಿ ವಾರವೂ ವಚನಗಳ ಸಾರವನ್ನು ಜನಸಾಮಾನ್ಯರಿಗೆ ತಿಳಿಸುತಿದ್ದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಏಕಲವ್ಯ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿಗಳು ಅವರಿಗೆ ಬಂದಿದ್ದವು. ತಮ್ಮ ಸ್ವಂತ ಊರು ಕೊಚರಿಯಲ್ಲಿ ಕನ್ನಡ ಮಾಧ್ಯಮ ಶಾಲೆಯೊಂದನ್ನು ಪ್ರಾರಂಭಿಸಿ ಶಿಕ್ಷಣವನ್ನು ಅವರು ನೀಡುತ್ತಾ ಬಂದಿದ್ದರು. ಮೃತರು ತಮ್ಮ ಹಿಂದೆ ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಸಾಂಸ್ಕೃತಿಕ ಪರಿಷತ್ತು, ರಾಷ್ಟ್ರೀಯ ಬಸವ ದಳ, ಕದಳಿ ವೇದಿಕೆ, ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಗಳ ಪದಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ. ಅವರ ಕೊನೆಯ ಇಚ್ಚೆಯಂತೆ ಅವರ ದೇಹವನ್ನು ಕೆ.ಎಲ್.ಇ ಆಸ್ಪತ್ರೆಗೆ ದಾನ ಮಾಡಲಾಯಿತು.