ಹೊಸಪೇಟೆ

ಮಾಧ್ಯಮಗಳಿಗೆ ಸ್ವ-ನಿಯಂತ್ರಣ ಅಗತ್ಯ : ಪ್ರೊ. ಬಿ.ಕೆ. ರವಿ

ಮಾಧ್ಯಮಗಳಿಗೆ ಸ್ವ-ನಿಯಂತ್ರಣ ಅಗತ್ಯ : ಪ್ರೊ. ಬಿ.ಕೆ. ರವಿ

ಹಂಪಿ 22: ಮಾಧ್ಯಮಗಳು ಆರೋಗ್ಯಪೂರ್ಣ ಸಮಾಜಕ್ಕಾಗಿ ತನ್ನ ಕಾರ್ಯ ನಿರ್ವಹಣೆಯಲ್ಲಿ ಸಾಮಾಜಿಕ ಹೊಣೆಗಾರಿಕೆ ಮತ್ತು ನೈತಿಕತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಮಾಧ್ಯಮಗಳು ಸ್ವ- ನಿಯಂತ್ರಣ ಪಾಲಿಸುವುದು ಅಗತ್ಯ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ. ರವಿ ಅವರು ಅಭಿಪ್ರಾಯಪಟ್ಟರು. 

ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಅಕ್ಟೋಬರ್ 21 ರಿಂದ 25 ರವರೆಗೆ ಆಯೋಜಿಸಿರುವ ಮಾಧ್ಯಮ ಲೋಕ ಆನ್‌ಲೈನ್ ಸರಣಿ ಉಪನ್ಯಾಸ ಮಾಲೆಯಲ್ಲಿ ಕನ್ನಡ ಮಾಧ್ಯಮದ ಇತ್ತೀಚಿನ ಪ್ರವೃತ್ತಿಗಳು ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. 

80 ರ ದಶಕದ ವರೆಗೂ ಮಾಧ್ಯಮಗಳು ಅಭಿವೃದ್ಧಿ ಸಂಬಂಧಿತ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿದ್ದವು. ತಂತ್ರಜ್ಞಾನದ ಆವಿಷ್ಕಾರದಿಂದ ಇಡೀ ಮಾಧ್ಯಮ ತನ್ನ ಸ್ವರೂಪವನ್ನು ಬದಲಾಯಿಸಿತು. ಮಾಧ್ಯಮ ಉದ್ಯಮದ ರೂಪಾಂತರ ಪಡೆಯಿತು. ಇಂದು ಜಗತ್ತನ್ನು  ಸಾಂಪ್ರದಾಯಿಕ ಮಾಧ್ಯಮ ದಿಂದ ನವಮಾಧ್ಯಮಗಳವರೆಗೆ ಎಲ್ಲವೂ ಆವರಿಸಿಕೊಂಡಿವೆ. ಜನಜೀವನದ ಮನಃ ಪಟಲದ ಮೇಲೆ ಛಾಪುಮೂಡಿಸಿವೆ ಎಂದು ಹೇಳಿದರು.  

ತಂತ್ರಜ್ಞಾನ ಸಂವಹನ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಬಲ್ಲದೇ ಹೊರತು ಸಂವಹನದ ಮೂಲ ಸ್ವರೂಪವನ್ನು ಬದಲಾಯಿಸಲಾರದು. ಆದರೆ ಇಂದು ನಾವು ತಂತ್ರಜ್ಞಾನದ ವೈಭವೀಕರಣದ ನೆಲೆಯಲ್ಲಿ ಸಂವಹನದ ಮೂಲ ಸ್ವರೂಪವನ್ನು ಮರೆಯುತ್ತದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು. 

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮೊದಲು ಮಾಧ್ಯಮಗಳು ಸುದ್ದಿ ಬಿತ್ತರಿಸುವುದಕ್ಕೆ ಅಷ್ಟೇ ಸಿಮೀತವಾಗಿದ್ದವು. ಆದರೆ ಇಂದು ಮಾಧ್ಯಮ ಲೋಕ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಬಾಹುಗಳನ್ನು ಚಾಚಿಕೊಂಡಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಏಕ ವಿಷಯಕ್ಕೆ ಸೀಮಿತರಾಗದೇ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ಸಂಗ್ರಹಿಸಿ ಹಲವು ರೀತಿಯಲ್ಲಿ ಯೋಚಿಸುವ ಶಕ್ತಿಯನ್ನು ಬೆಳಸಿಕೊಳ್ಳಬೇಕು. ನಿರೂಪಣೆಯ ಚತುರತೆಯ ಜೊತೆಗೆ ಜ್ಞಾನವು ಕೂಡ ಅತ್ಯಾವಶ್ಯಕ. ಇತ್ತೀಚಿನ ದಿನಗಳಲ್ಲಿ ಮಾಧ್ಯಮವನ್ನು ನಿರ್ವಹಿಸುವುದು ಮತ್ತು ಮಾಧ್ಯಮದಲ್ಲಿ ಕೆಲಸ ಮಾಡುವುದು ಬಹುದೊಡ್ಡ ಸವಾಲಿನ ಮತ್ತು ಜವಾಬ್ದಾರಿಯುತ ಕೆಲಸವಾಗಿದೆ. ಮಾಧ್ಯಮದ ದೃಷ್ಟಿಯಿಂದ ಯಾರು ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾಧ್ಯಮ ಕ್ಷೇತ್ರ ಎಲ್ಲವನ್ನು ಒಳಗೊಳ್ಳುತ್ತಿದೆ ಎಂದರು. 

ಈ ಕಾರ್ಯಕ್ರಮ ದಲ್ಲಿ  ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಎಸ್‌.ವೈ. ಸೋಮಶೇಖರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕರರಾದ ಪದ್ಮಾವತಿ ಕೆ. ನಿರೂಪಿಸಿದರು. ಅಧ್ಯಾಪಕರಾದ ರೂಪ ಕೆ. ವಿದ್ವಾಂಸರನ್ನು ಪರಿಚಯಿಸಿ, ವಂದಿಸಿದರು. 

ಈ ಸಂದರ್ಭದಲ್ಲಿ ಅಧ್ಯಾಪಕರಾದ ಡಾ.ಲೋಕೇಶ ಎಸ್‌.ಕೆ, ಛಾಯಾಗ್ರಾಹಕರಾದ ಅಭಿರೂಪ್ ಎಂ.ಟಿ, ವಿದ್ಯಾರ್ಥಿಗಳು ಮತ್ತು ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗಿಯಾಗಿದ್ದರು. 


ಸುದ್ದಿ ಓದಿ