ಮಹಾರಾಷ್ಟ್ರದಲ್ಲಿ ಎರಡನೇ ಲಾಕ್‌ಡೌನ್ ಸಾಧ್ಯತೆ; ಅಜಿತ್ ಪವಾರ್
ಪುಣೆ,
ನವೆಂಬರ್ 23: ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ ಆತಂಕಕಾರಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ
ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಘೋಷಿಸುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ
ಅಜಿತ್ ಪವಾರ್ ಸುಳಿವು ನೀಡಿದ್ದಾರೆ.
ಈ ಕುರಿತು ಭಾನುವಾರ ಹೇಳಿಕೆ ನೀಡಿದ್ದ ಪವಾರ್, ದೀಪಾವಳಿ ಸಮಯದಲ್ಲಿ ಬಹುದೊಡ್ಡ ಜನಸಂಖ್ಯೆ ಕಂಡುಬಂದಿತ್ತು. ಗಣೇಶ್ ಚತುರ್ಥಿ ಹಬ್ಬದ ಸಂದರ್ಭದಲ್ಲೂ ಇದೇ ಪರಿಸ್ಥಿತಿಯಿತ್ತು. ಆದ್ದರಿಂದ ಮುಂದಿನ 8-10 ದಿನಗಳವರೆಗೆ ಪರಿಸ್ಥಿತಿಯನ್ನು ಪರಿಶೀಲಿಸಿ, ಲಾಕ್‌ಡೌನ್ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಈ ಕುರಿತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸುತ್ತಿದ್ದೇವೆ ಎಂದರು.
ಮುಂಬೈನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತಾದರೂ, ಕಳೆದ ಎರಡು ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ದೀಪಾವಳಿ ಹಬ್ಬದ ನಂತರ ವಲಸಿಗರು ಹಿಂದಿರುಗುವ ಸಾಧ್ಯತೆಗಳು ಹೆಚ್ಚಿದ್ದ ಕೋವಿಡ್ ಪ್ರಕರಣಗಳ ಏರಿಕೆ ಕುರಿತು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.