ಸಂಕೇಶ್ವರ

ಶಾಲಾ ವಾಹನ ಖರೀದಿ ಯೋಜನೆ ಕ್ರಮ ಸ್ವಾಗತಾರ್ಹ: ರಮೇಶ ಕತ್ತಿ

ಶಾಲಾ ವಾಹನ ಖರೀದಿ ಯೋಜನೆ ಕ್ರಮ ಸ್ವಾಗತಾರ್ಹ: ರಮೇಶ ಕತ್ತಿ

ಸಂಕೇಶ್ವರ 05: ಸರಕಾರಿ ಶಾಲಾ ಮಕ್ಕಳನ್ನು ಶಾಲೆಗೆ ಕರೆತರಲು ಶಾಲಾ ವಾಹನ ಖರೀದಿ ಯೋಜನೆ ಆರಂಭಿಸಿರುವ ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹವಾಗಿದೆ ಎಂದು ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದ್ದಾರೆ. 

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಗ್ರಾಮೀಣ ಪ್ರದೇಶದ ತೋಟಪಟ್ಟಿ ಹಾಗೂ ಹೊರವಲಯದಲ್ಲಿ ವಾಸವಾಗಿರುವ ಮಕ್ಕಳ ಪಾಲಕರು ಸುರಕ್ಷತೆ ದೃಷ್ಟಿಯಿಂದ ಶಾಲೆಯಿಂದ ವಂಚಿತವಾಗಿದ್ದರು. ಈ ಕುರಿತು ಕಳೆದ ವರ್ಷ ನಾನು ಸಹ ಈ ಯೋಜನೆ ಆರಂಭಿಸಲು ಸರಕಾರವನ್ನು ಒತ್ತಾಯಿಸಿದ್ದೆ. ಇದೀಗ ಶಾಸಕರ ಅನುದಾನದಡಿ ಯೋಜನೆ ಆರಂಭಿಸಲು ಅನುಮತಿ ನೀಡಿರುವ ಸರಕಾರದ ಕ್ರಮ ಸಂತಸ ತಂದಿದೆ.  

ಆದರೂ ಜನಪ್ರತಿನಿಧಿಗಳಿಗಿರುವ ಅಲ್ಪ ಅನುದಾನದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲು ಬಹು ವರ್ಷ ಬೇಕಾಗಬಹುದು. ಹೀಗಾಗಿ ಶಿಕ್ಷಣ ಇಲಾಖೆ ಅನುದಾನದಲ್ಲಿಯೇ ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು ಎಂದರು. ಪೂರ್ಣ ಪ್ರಮಾಣದಲ್ಲಿ ಈ ಯೋಜನೆ ಜಾರಿಯಿಂದ ಅಲ್ಪ ಮಕ್ಕಳಿರುವ ಶಾಲೆಗಳನ್ನು ವೀಲೀನಗೊಳಿಸಬಹುದಾಗಿದ್ದು, ಇದರಿಂದ ಈಗಿರುವ ಶಿಕ್ಷಕರ ಕೊರತೆ ತಾತ್ಕಾಲಿಕವಾಗಿ ನಿವಾರಣೆಯಾಗುತ್ತದೆ. ಅಲ್ಲದೇ ಸಂಪನ್ಮೂಲಗಳ ಸದ್ಬಳಕೆಯಾಗುತ್ತದೆ ಎಂದರು. 

ಅದರಂತೆ ಸರಕಾರ ರೂಪಿಸುವ ಯೋಜನೆಗಳಲ್ಲಿರುವ ನೂನ್ಯತೆ ಹುಡುಕಿ ಅದನ್ನು ಸರಿಪಡಿಸುವ ಜವಾಬ್ದಾರಿ ಹೊಂದಿರುವ ಪ್ರತಿಪಕ್ಷಗಳು ಕೇವಲ ಜಾತಿ-ಮತ, ಕೋಮು ಗಲಬೆ ಕುರಿತಾದ ಚಟುವಟಿಕೆ ಪ್ರಚೋದಿಸುತ್ತಿವೆಯೇ ಹೊರತು ಸ್ಥಳೀಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತಿಲ್ಲ ಎಂದರು. 

ಸಹಕಾರ ಸಂಘಗಳ ನೆರವು :  

ಜಿಲ್ಲೆಯಲ್ಲಿರುವ ಬಿಡಿಸಿಸಿ ಬ್ಯಾಂಕ, ಹಲವು ಸಹಕಾರ ಸಂಘ ಸಂಸ್ಥೆಗಳು ಸಹ ಹಿಂದುಳಿದ ಪ್ರದೇಶದಲ್ಲಿರುವ ಮಕ್ಕಳನ್ನು ಶಾಲೆಗೆ ಕರೆತರಲು ಸರಕಾರದ ಯೋಜನೆಗೆ ನೆರವು ನೀಡಲು ಸಿದ್ಧವಾಗಿವೆ. ಬಡವರ ಮಕ್ಕಳಿಗೆ ಶಿಕ್ಷಣ ಸಿಗಬೇಕಾಗಿದ್ದು, ಈ ಯೋಜನೆಗೆ ಸರಕಾರ ಮಾತ್ರವಲ್ಲ ಅದೇ ಶಾಲೆಯಲ್ಲಿ ಕಲಿತು ಉನ್ನತ ಸ್ಥಾನಮಾನ ಕಂಡುಕೊಂಡಿರುವ ಹಳೆ ವಿದ್ಯಾರ್ಥಿಗಳು ಸಹ ಶಾಲಾಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು. 


ಸುದ್ದಿ ಓದಿ