ಮಾಲು ಸಮೇತ ಕಳ್ಳರನ್ನು ಬಂಧಿಸುವಲ್ಲಿ ಸವದತ್ತಿ ಪೊಲೀಸರು ಯಶಸ್ವಿ
ಸವದತ್ತಿ 28: ತಾಲೂಕಿನ ಬೆಟಸೂರು ಗ್ರಾಮದ ಹೊರವಲಯದಲ್ಲಿರುವ ಮನೆಯಲ್ಲಿ ಜ.6ರಂದು ನಡೆದ ಕಳ್ಳತನದ ಪ್ರಕರಣವನ್ನು ಭೇದಿಸಿದ ಸವದತ್ತಿ ಪೊಲೀಸರು ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚುಳಕಿ, ಬೆಟಸೂರ, ಚಿಕ್ಕ ಉಳ್ಳಿಗೇರಿ ಗ್ರಾಮಗಳಲ್ಲಿ ಕಳ್ಳತನ ಮಾಡಿ ಪರಾರಿಯಾದ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಸವದತ್ತಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಗಲಿನಲ್ಲಿ ಚಿಂದಿ ಆಯುವ ಹಾಗೂ ಭಿಕ್ಷೆ ಬೇಡುವ ನೆಪದಲ್ಲಿ ಕಳ್ಳರು ಬೆಟಸೂರ ಗ್ರಾಮದ ಹೊರವಲಯದಲ್ಲಿರುವ ಗುರ್ಪ ಬಸಪ್ಪ ಅಳಗೋಡಿಯವರ ಮನೆಗೆ ಕನ್ನ ಹಾಕಿ ಮನೆಯಲ್ಲಿದ್ದ ಆಭರಣ ಮತ್ತು ಹಣವನ್ನು ಕದ್ದು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕಳ್ಳತನದ ಜಾಡು ಹಿಡಿದ ಪೊಲೀಸರು ಯಲ್ಲಮ್ಮನಗುಡ್ಡದಲ್ಲಿ ಇಬ್ಬರು ಆರೋಪಿತರನ್ನು ಬಂಧಿಸಿ ಅವರಿಂದ 60 ಗ್ರಾಂ ಬಂಗಾರದ ಆಭರಣಗಳು, 100 ಗ್ರಾಂ ಬೆಳ್ಳಿಯ ಮೂರ್ತಿಗಳನ್ನು ಮತ್ತು 50 ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತರಿಂದ ಒಟ್ಟು 3.60 ಲಕ್ಷ ರೂ.ಗಳ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಡಿಎಸ್ಪಿ ರಾಮನಗೌಡ ಹಟ್ಟಿಯವರ ಮಾರ್ಗದರ್ಶನದಲ್ಲಿ ಪಿ.ಐ ಕರುಣೇಶಗೌಡ, ಪಿಎಸ್ಐ ಪ್ರವೀಣ ಗಂಗೊಳ್ಳಿ, ಕೆ.ಎಮ್.ಕಲ್ಲೂರ, ರಮೇಶ ಗೇಜೇರಿ, ಉಮೇಶ ಗಾಣಗಿ, ಮಲ್ಲಿಕಾರ್ಜುನ ತೇರದಾಳ, ಹನಮಂತ ವಾಸನ, ಆನಂದ ಕಪ್ಪತ್ತಿ, ಶ್ರೀಕಾಂತ ಜಾಧವ, ಸರಸ್ವತಿ ಹಂಪಣ್ಣವರ, ಸವಿತಾ ಹೊಸೂರ ನೇತೃತ್ವದ ತಂಡವು ಆರೋಪಿತರನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.