ಸೌಂದತ್ತಿ

ಸವದತ್ತಿಯ ಅನುಪಮಾ ಹಿರೇಹೊಳಿ ರಾಜ್ಯಕ್ಕೆ ಪ್ರಥಮ

ಸವದತ್ತಿಯ ಅನುಪಮಾ ಹಿರೇಹೊಳಿ ರಾಜ್ಯಕ್ಕೆ ಪ್ರಥಮ

ಸವದತ್ತಿ 08: ಸುಕ್ಷೇತ್ರ ಯಲ್ಲಮ್ಮನ ಕ್ಷೇತ್ರ ಸವದತ್ತಿಯಲ್ಲಿ ವಿದ್ಯಾರ್ಥಿನಿಯೋರ್ವಳು ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಸವದತ್ತಿ ತಾಲೂಕನ್ನು ಇತಿಹಾಸದ ಪುಟಗಳಲ್ಲಿ ಉಳಿಯುವಂತೆ ಮಾಡಿದ್ದಾಳೆ. ಸವದತ್ತಿಯ ಕುಮಾರೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಅನುಪಮಾ ಶ್ರೀಶೈಲ ಹಿರೇಹೊಳಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಸವದತ್ತಿಗೆ ಹಮ್ಮೆಯ ಗರಿ ಮೂಡಿಸಿದ್ದಾಳೆ. 

ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸವದತ್ತಿ ತಾಲೂಕಿನಲ್ಲಿ ಇಲ್ಲಿಯವರೆಗೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಮೊದಲ ವಿದ್ಯಾರ್ಥಿನಿ ಇವಳಾಗಿರುವದರಿಂದ ಶೈಕ್ಷಣಿಕ ವಲಯದಲ್ಲಿ ಸವದತ್ತಿಗೆ ಹೆಮ್ಮೆಯ ವಿಷಯವಾಗಿದೆ. 

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಷಯ ತಿಳಿದ ತಕ್ಷಣ ಬಿಇಓ ಶ್ರೀಶೈಲ ಕರೀಕಟ್ಟಿ ಕುಮಾರೇಶ್ವರ ಶಿಕ್ಷಣ ಸಂಸ್ಥೆಗೆ ಹೋಗಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯೊಂದಿಗೆ ವಿದ್ಯಾರ್ಥಿನಿ ಅನುಪಮಾಳನ್ನು ಸನ್ಮಾನಿಸಿ ಗೌರವಿಸಿದ್ದಾರೆ. 

ನಂತರ ಮಾತನಾಡಿದ ಶಿಕ್ಷಣಾಧಿಕಾರಿಗಳು ಬಡತನದ ಕಷ್ಟದಲ್ಲಿಯೂ ಅದನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ವಿದ್ಯಾರ್ಥಿನಿಯು ಮಾದರಿಯಾಗಿ ಹೊರ ಹೊಮ್ಮಿದ್ದಾಳೆ ಎಂದರು. ವಿದ್ಯಾರ್ಥಿನಿ ಮುಂದಿನ ಭವಿಷ್ಯಕ್ಕೆ ಸರಕಾರದಿಂದ ಸೌಲಭ್ಯಗಳು ದೊರಕಲು ಸೂಕ್ತ ಅನುಕೂಲತೆ ಮಾಡಲಾಗುವದು ಎಂದರು. 

ಕುಮಾರೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಸುಭಾಸ ಕೌಜಲಗಿ ಮಾತನಾಡಿ ನಮ್ಮ ಸಂಸ್ಥೆಯ ವಿದ್ಯಾರ್ಥಿನಿ  ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವದು ಸಂತಸ ಮೂಡಿಸಿದೆ ಎಂದರು. ವಿದ್ಯಾರ್ಥಿನಿಯ ಸಾಧನೆಗೆ  ಅಭಿನಂದಿಸಿದ ಅವರು ಅವಳ ಶೈಕ್ಷಣಿಕ ಭವಿಷ್ಯಕ್ಕೆ ಸೂಕ್ತ ಸಹಾಯ ಮಾಡುವದಾಗಿ ಹೇಳಿದರು. 

ಆಡಳಿತ ಮಂಡಳಿ ನಿರ್ದೇಶಕರಾದ ಚಂದ್ರಣ್ಣಾ ಸವಟಗಿ, ಬಸವರಾಜ ಹೂಲಿಕಟ್ಟಿ, ಬಸವರಾಜ ಅಕ್ಕಿ, ಪ್ರಾಚಾರ್ಯರಾದ ನಾಗರಾಜ ಚಂದರಗಿ, ಜಿ. ಆಯ್‌.ಗೋರಿನಾಯ್ಕ, ಬಸವರಾಜ ಮಡಿವಾಳರ, ಉಮೇಶ ಹೂಲಿ, ಎಮ್‌.ಡಿ.ಹುದ್ದಾರ, ರವಿ ನಲವಡೆ, ಜಿ.ಎಮ್‌.ಕರಾಳೆ, ವಿದ್ಯಾರ್ಥಿನಿ ತಾಯಿಯಾದ ರಾಜಶ್ರೀ ಶ್ರೀಶೈಲ ಹಿರೇಹೊಳಿ, ಬಸವರಾಜ ಮಡಿವಾಳರ ಉಪಸ್ಥಿತರಿದ್ದರು. 


ಸುದ್ದಿ ಓದಿ