4ನೇ ದಿನಕ್ಕೆ ಕಾಲಿಟ್ಟ ಹಮಾಲರ ಧರಣಿ ಸತ್ಯಾಗ್ರಹ
ತಾಳಿಕೋಟಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರವಾನಿಗೆ ಆಧಾರಿತ ಹಮಾಲರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಶ್ರೀ ಬಸವೇಶ್ವರ ಮಾರ್ಕೆಟ್ ಯಾರ್ಡ ಹಮಾಲರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಡಿ. 21 ರಿಂದ ಆರಂಭಗೊಂಡಿರುವ ಧರಣಿ ಸತ್ಯಾಗ್ರಹವು ಇಂದು 4ನೇ ದಿನಕ್ಕೆ ತಲುಪಿದೆ.
ಸುಮಾರು 15 ವರ್ಷಗಳಿಂದ ಸದರಿ ನಿವೇಶನಗಳಿಗಾಗಿ ಬೇಡಿಕೆ ಇದ್ದು ಇದಕ್ಕಾಗಿ ಆಗಾಗ ಧರಣಿ ಪ್ರತಿಭಟನೆ ಹಾಗೂ ಸತ್ಯಾಗ್ರಹಗಳು ನಡೆಯುತ್ತಲೇ ಇವೆ. ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ)ಯವರು ಬಂದ ನಂತರ ಇವರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿ ಸಮಸ್ಯೆಯ ಪರಿಹರಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಆದರೆ ಕಾರ್ಯರೂಪಕ್ಕೆ ಬಾರದ ಕಾರಣ ಮತ್ತೇ ಈ ಹೋರಾಟ ನಡೆಯುತ್ತಿದೆ. ನಿನ್ನೆ ಶುಕ್ರವಾರ 3ನೇ ದಿನ ಧರಣಿ ಸತ್ಯಾಗ್ರಹದಲ್ಲಿ ಹಮಾಲರ - ಸಂಘದ ಅಧ್ಯಕ್ಷ ಸೋಫಿಸಾಬ ಪತ್ತೇಖಾನ, ಯಮನಪ್ಪ ಬರದೇನಾಳ, ಶರಣಪ್ಪ ಹಿರೇಕುರುಬರ, ಭೀಮಣ್ಣ ತಳವಾರ, ಮಲಕಾಜಪ್ಪ ಮದರಿ, ಮಲ್ಲಿಕಾರ್ಜುನ ಹದಗೋಳ, ಸಂಜೀವಪ್ಪ ಬರದೇನಾಳ, ಭೀಮಾಶಂಕರ ಅಂಬಿಗೇರ, ಹಣಮಂತ ಪೂಜಾರಿ, ಗೋವಿಂದ ಬಿಳೇಭಾವಿ, ನಿಂಗಪ್ಪ ಪೂಜಾರಿ, ಮುರ್ತುಜಾ ಜಕಾತಿ, ರಾಮನಗೌಡ ಪಾಟೀಲ, ಕಾಶಿನಾಥ ಹಿಪ್ಪರಗಿ, ಹಸನ ಕಲಕೇರಿ, ದೇವಪ್ಪ ಅಲ್ಲಾಪೂರ ಮತ್ತಿತರರು ಉಪಸ್ಥಿತರಿದ್ದರು.