ರಾಣೆಬೆನ್ನೂರ

ಆಡಳಿತ ಸರಕಾರ ಜನಸಾಮಾನ್ಯ ಬದುಕು ಕಟ್ಟಿ ಕೊಡಬೇಕು: ಸತ್ತಾರಖಾನ್

ಆಡಳಿತ ಸರಕಾರ ಜನಸಾಮಾನ್ಯ ಬದುಕು ಕಟ್ಟಿ ಕೊಡಬೇಕು: ಸತ್ತಾರಖಾನ್

ರಾಣೇಬೆನ್ನೂರು 29: ರಾಜ್ಯದಲ್ಲಿ ಜನರ ಹಿತಾಸಕ್ತಿಗಿಂತ ರಾಜಕೀಯ ನಾಯಕರ ಖುರ್ಚಿ ಕಿತ್ತಾಟವೇ ಹೆಚ್ಚಾಗುತ್ತಿರುವುದು ಕರುನಾಡಿನ ಜನರ ದುರಾದೃಷ್ಟಕರ ಸಂಗತಿಯಾಗಿದೆ ಎಂದು ತಾಲೂಕಾ ಅಲ್ಪಸಂಖ್ಯಾತರ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಅಸಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಸತ್ತಾರಖಾನ್ ಎಂ.ಪಾಟೀಲ ಹೇಳಿದ್ದಾರೆ. 

ಅವರು ಇಂದು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ತಮ್ಮ ಖುರ್ಚಿ ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟದ ಕುರಿತಂತೆ ಸೂಕ್ಷ್ಮವಾಗಿ ಅವಲೋಕನೆ ಮಾಡುವುದರ ಮೂಲಕ ಪತ್ರಿಕೆಯೊಂದಿಗೆ ಮಾತನಾಡುತ್ತ ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ವಿಷಾಧಿಸಿದರು. 

ಬಿಜೆಪಿ ಜನರ ಬಹು ನೀರೀಕ್ಷೆ ಮತ್ತು ಅಪೇಕ್ಷೆ ಮೇರೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ದೇಶದ ರಕ್ಷಣೆ ವಿಚಾರವಾಗಿ ಅವರು ಮಾಡಿರುವ ಮತ್ತು ತೆಗೆದುಕೊಂಡಿರುವ ನಿಲುವು ಸ್ವಾಗತಾರ್ಹವಾಗಿದೆ. ಆದರೆ, ಕಳೆದ ವರ್ಷದಿಂದ ಬಿಜೆಪಿ ಮುಖಂಡರು ರಾಜಕೀಯವಾಗಿ ಅನುಸರಿಸುತ್ತಿರುವ ಅಧಿಕಾರದ ಲಾಲಸೆ ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆಎಂದರು. 

ಕಳೆದ ವರ್ಷದಿಂದ ಕೋವಿಡ್‌-19 ಮಹಾಮಾರಿ ಸೋಂಕು ರೋಗದಿಂದ ದೇಶದ ಮತ್ತು ನಾಡಿನ ನಾಗರಿಕರು ನಿತ್ಯವೂ ಸಾವು ಬದುಕಿನ ಮಧ್ಯ ಹೋರಾಟದಲ್ಲಿಯೇ ಕಾಲ ತಳ್ಳುತ್ತಾ ಸಾಗಿದ್ದಾರೆ. ಸರಕಾರ ತೆಗೆದುಕೊಂಡ ನಿಯಮದಂತೆ ಲಾಕ್‌ಡೌನ್‌ಗೆ ಒಳಪಟ್ಟು ಈ ವರ್ಷದವರೆಗೂ ಸಹಕಾರ ನೀಡಿದ್ದಾರೆ. ಈ ವರ್ಷ ಪುನಃ ಮಹಾಮಾರಿ ರೋಗವು ಅತೀವ ಪ್ರಮಾಣದಲ್ಲಿ ಹರಡಿ ಮತ್ತಷ್ಟು ಜನರನ್ನು ಹೈರಾಣಗೊಳಿಸಿದೆ. ಅಲ್ಲದೆ ಬದುಕು ಭಾರವಾಗಿ ಜೀವನ ಸಾಕಾಗಿ ಸಾಕಪ್ಪಾ ಸಾಕು ಎನ್ನುವಂತಾಗಿದೆ ಎಂದು ವಿಶ್ಲೇಷಿಸಿ ಮಾಹಿತಿ ನೀಡಿದ ಸತ್ತಾರಖಾನ್ ಅವರು, ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಕಣ್ಣೆದುರಲ್ಲೇ ಅಧಿಕ ಪ್ರಮಾಣದಲ್ಲಿ ಸಾವು ಕಂಡಿದ್ದು ಬಹು ದೊಡ್ಡ ದುರಂತ. ಸರಕಾರ ಕಳೆದ ವರ್ಷವೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಸಾವುಗಳನ್ನು ತಡೆಯಬಹುದಾಗಿತ್ತು. ಆಡಳಿತ ವಿಫಲವಾಗಿದ್ದು ವಾಸ್ತವಿಕ ಸತ್ಯ ಎಂದರು. 

ರಾಜ್ಯದಲ್ಲಿ ಆಡಳಿತ ಹೊಂದಿರುವ ಮುಖ್ಯಮಂತ್ರಿ ಯಡಿಯೂರ​‍್ಪನವರ ಸರಕಾರ, ನೆರೆ ಹಾವಳಿ, ಕೋವಿಡ್ ಮತ್ತು ಅಧಿಕಾರದ ಆಸೆಗಾಗಿ ಜನ ನಾಯಕರು ಅನುಸರಿಸಿದ ಆಂತರಿಕ ಗದ್ದಲ, ಗಲಾಟೆ ಮತ್ತು ರೆಸಾರ್ಟ್‌ ರಾಜಕಾರಣದ ಗೊಂದಲವು ಯಾವ ಬಹು ನೀರೀಕ್ಷೆ ಇಟ್ಟುಕೊಂಡು ಅಧಿಕಾರಕ್ಕೆ ತಂದಿದ್ದರೋ; ದೇಶದ ಮತ್ತು ನಾಡಿನ ಜನತೆ ಪುನಃ ನಾವು ಯಡವಿದ್ದೇವೆ ಎನ್ನುವ ಸಾರ್ವತ್ರಿಕ ಮನೋಭಾವನೆಯ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ತಮ್ಮ ಖುರ್ಚಿ ಆಸೆಯನ್ನು ಕೈ ಬಿಟ್ಟು ಜನಸಾಮಾನ್ಯರ ಬದುಕಿಗೆ ನೆರವಾಗಬೇಕಾಗಿದೆ ಎಂದರು. 

ರಾಜ್ಯದ ಕಾಂಗ್ರೆಸ್ ಪಕ್ಷದ ಮುಖಂಡರ ವಲಯದಲ್ಲಿ ಮುಂದಿನ ಸಿಎಂ ನಾನೇ ಎನ್ನುವ ಪರಸ್ಪರ ಹೇಳಿಕೆ ನೀಡುವುದರ ಮೂಲಕ ಜನರಲ್ಲಿ ಕಾಂಗ್ರೆಸ್ ಮೇಲಿರುವ ಅಭಿಮಾನವನ್ನು ಕಳೆದುಕೊಳ್ಳುವಂತಾಗಿದೆ. ಯಾರೇ ಅಧಿಕಾರಕ್ಕೆ ಬರಲಿ, ಪುನಃ ಬಹುದೊಡ್ಡ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಸಂಪೂರ್ಣ ಅಧಿಕಾರಕ್ಕೆ ತರುವ ಬಹುದೊಡ್ಡ ಪ್ರಯತ್ನ ನಡೆಯಬೇಕೇ ಹೊರತು; ಜನಸಾಮಾನ್ಯರು ಅನೇಕ ಸಮಸ್ಯೆಯಿಂದ ಬದುಕನ್ನು ಕಳೆದುಕೊಂಡು ಜೀವ ಉಳಿದರೆ ಸಾಕು ಎನ್ನುವ ವಾತಾವರಣದಲ್ಲಿರುವಾಗ ಸಿಎಂ ಜಗಳ ಬೇಕಾಗಿತ್ತೇ? ಎಂದು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಪ್ರಶ್ನಿಸಿರುವ ಪಾಟೀಲ ಅವರು, ಪ್ರಸ್ತುತ ಈ ರಾಜಕೀಯ ಖುರ್ಚಿ ಗಲಾಟೆಯಿಂದ ಕೂಸು ಹುಟ್ಟುವ ಮುನ್ನವೇ ಖುಲಾವಿ ಹೊಲಿಸಿದಂತಾಗಿದೆ. ಮುಖಂಡರು ಮುಂದಿನ ವಿಚಾರವನ್ನು ಈಗಲೇ ಚರ್ಚೆಗೆ ಒಳಪಟ್ಟು ರಾಜ್ಯದ ಜನರಿಂದ ಅಪಹಾಸ್ಯಕ್ಕೆ ಒಳಪಡದೆ ಸಿದ್ಧತೆಗೆ ಮುಂದಾಗಿ ಸಿಎಂ ಬಡಿದಾಟ ಬೇಡ ಎಂದು ಪಾಟೀಲ ವಿನಮ್ರ ಮನವಿ ಮಾಡಿದ್ದಾರೆ. 

ಹಾವೇರಿ ಜಿಲ್ಲೆ ಕಳೆದ ವರ್ಷ ಕೊರೊನಾ ಮುಕ್ತವಾಗಿತ್ತು. ರಾಜ್ಯದಲ್ಲಿ ಮಹಾಮಾರಿ ತನ್ನ ರೌದ್ರತಾಂಡವ ನೃತ್ಯವಾಡಿದ್ದರೂ ಜಿಲ್ಲೆಯಲ್ಲಿ ತನ್ನ ಆಟ ಆಡಿರಲಿಲ್ಲ. ಈ ವರ್ಷ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಗಳು ಕೋವಿಡ್ ಲಸಿಕೆ ಪಡೆಯಲು ಹೋರಾಡುತ್ತಿದ್ದಾರೆ ಅಲ್ಲದೆ ಲಸಿಕೆ ಬಗ್ಗೆ ಜಾಗೃತಿಗೊಂಡಿರುವ ನಾಗರಿಕರು ನಿತ್ಯವೂ ಸರದಿ ಸಾಲಿನಲ್ಲಿ ಲಸಿಕೆ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ. 18 ವರ್ಷ ತುಂಬಿದ ಎಲ್ಲ ಯುವಕರಿಗೆ ಲಸಿಕೆ ನೀಡುತ್ತಿರುವುದು ಕೋವಿಡ್ ನಿಯಂತ್ರಿಸಲು ಅನುಸರಿಸುತ್ತಿರುವ ಸರಕಾರದ ಈ ಮುಂಜಾಗ್ರತಾ ಕ್ರಮವು ಸ್ವಾಗತಾರ್ಹವಾಗಿದೆ. ಪರಿಪೂರ್ಣ ಲಸಿಕೆ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು. ಬಹುತೇಕ ಜಿಲ್ಲೆಗಳು ಅನ್‌ಲಾಕ್ ಆಗಿವೆ ಎಂದು ಮೈ ಚಳಿ ಬಿಟ್ಟು ಮಾಸ್ಕ್‌ ಧರಿಸದೆ, ಅಂತರವನ್ನು ಕಾಯ್ದುಕೊಳ್ಳದೆ ಬೇಕಾಬಿಟ್ಟಿಯಾಗಿ ಸಂಚರಿಸದೆ ಜಾಗೃತರಾಗಿ ಕೊರೊನಾ ಬಾರದಂತೆ ಹೊಡೆದೋಡಿಸಲು ಮುಂದಾಗಬೇಕಾದ ಇಂದಿನ ಬಹು ಅಗತ್ಯವಾಗಿದೆ ಎಂದು ಸಾರ್ವಜನಿಕರಲ್ಲಿ ಸಾಮಾಜಿಕ ಚಿಂತಕ ಸತ್ತಾರಖಾನ್ ಪಾಟೀಲ ಅವರು ಮನವಿ ಮಾಡಿದ್ದಾರೆ. 


ಸುದ್ದಿ ಓದಿ