ಸಸಾಲಟ್ಟಿ ಏತ ನೀರಾವರಿ ಎರಡನೇ ಹಂತದ 210ಕೋಟಿ ಕಾಮಗಾರಿ ಸ್ವಾಗತಾರ್ಹ!
ಸರ್ಕಾರ ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಿ.
ಮಹಾಲಿಂಗಪುರ : ತೇರದಾಳ ಭಾಗದ ಸಸಾಲಟ್ಟಿ ಏತ ನೀರಾವರಿ ಎರಡನೇ ಹಂತದ 210ಕೋಟಿ ಕಾಮಗಾರಿಗೆ ರಾಜ್ಯ ಸದನದ ಅನುಮೋದನೆ ಸ್ವಾಗತಾರ್ಹವಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಇನ್ನು ವಿಳಂಬ ಮಾಡದೆ ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಿ ಈ ಭಾಗದ 15 ಹಳ್ಳಿಗಳ ರೈತರ ಕೃಷಿ ಬದುಕಿನಲ್ಲಿ ಹರುಷ ತುಂಬಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ರೈತ ಸಂಘ, ಹಸಿರು ಸೇನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಆಗ್ರಹಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕಾನಿಪ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ಭಾಗದ ರೈತರು ಪಕ್ಷಾತೀತವಾಗಿ 15 ವರ್ಷಗಳಿಂದ ಸಸಾಲಟ್ಟಿ ಏತ ನೀರಾವರಿಗೆ ಶ್ರಮಿಸಿದ್ದಾರೆ. ಇದರ ಫಲವಾಗಿ ತೇರದಾಳ ಭಾಗದ ರಬಕವಿ/ಬನಹಟ್ಟಿ, ಜಮಖಂಡಿ, ಮುಧೋಳ, ಬಿಳಿಗಿ ತಾಲೂಕುಗಳ ಮತ್ತು ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ 5ಹಳ್ಳಿಗಳಿಗೆ ಅಂದಾಜು 8.5 ಟಿಎಂಸಿ ನೀರು 37ಸಾವಿರ ಹೆಕ್ಟೇರ್ ಭೂಮಿಗೆ ದೊರೆತು ವರದಾನವಾಗಿ ಪರಿಣಮಿಸಿದೆ ಎಂದು ಏತ ನೀರಾವರಿಯ ಮಹತ್ವ ತಿಳಿಸಿದರು.
ಈ ಹಿಂದೆ ಸಿದ್ಧರಾಮಯ್ಯ ಸರ್ಕಾರವಿದ್ದಾಗ ಅಂದಿನ ನೀರಾವರಿ ಮಂತ್ರಿ ಎಂ ಬಿ.ಪಾಟೀಲ್ ಹಾಗೂ ತೇರದಾಳ ಶಾಸಕಿ ಉಮಾಶ್ರೀ ಅವರ ಪ್ರಯತ್ನದ ಫಲವಾಗಿ ಮಹತ್ವಾಕಾಂಕ್ಷಿ ಯೋಜನೆ ಸಸಾಲಟ್ಟಿ ಏತ ನೀರಾವರಿಗೆ 260ಕೋಟಿ ಹಣ ಮೊದಲ ಹಂತದ ಯೋಜನೆಗಾಗಿ ಮಂಜೂರಾಗಿರುವ ಬಗ್ಗೆ ಮಾತನಾಡಿ ಕಾಂಗ್ರೆಸ್ ಸರ್ಕಾರ ಕಾಲಾವಧಿಯ ಕಾರ್ಯ ಶ್ಲಾಘಿಸಿದರು.
ತೇರದಾಳ ಕ್ಷೇತ್ರದ ಸಂಘ ಸಂಸ್ಥೆಗಳು, ಪಕ್ಷಾತೀತ ಮುಖಂಡರು, ರೈತರು, ಪತ್ರಕರ್ತರು ಮತ್ತು ಸಾರ್ವಜನಿಕರು ಏತ ನೀರಾವರಿ ಹೋರಾಟದಲ್ಲಿ ಪಾಲ್ಗೊಂಡ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ. ಶಿವಲಿಂಗ ಟಿರಕಿ ಮಾತನಾಡಿದರು. ರಾಜೇಂದ್ರ ಮಿರ್ಜಿ, ನಿಂಗಗೌಡ ಹ್ಯಾಗಾಡಿ ಇದ್ದರು