ಅಂತರವಳ್ಳಿ ಗ್ರಾಮದಲ್ಲಿ ಸರಕಾರದ ನಡೆ ಹಳ್ಳಿಯ ಕಡೆಗೆ ಗ್ರಾಮ ವಾಸ್ತವ್ಯ
ರಾಣೇಬೆನ್ನೂರ 21: ವೃದ್ಧರ, ವಿಧವೆಯರ, ಅಂಗವಿಕಲರ, ಬಡ ರೈತರ, ದೀನ ದಲಿತರ ಸಮಸ್ಯೆಗಳನ್ನು ಹೊತ್ತು ಸರ್ಕಾರದ ವಿವಿಧ ಕಚೇರಿಗಳಿಗೆ ಅಲೆಯಬಾರದು ಎಂಬ ಸದುದ್ದೇಶದಿಂದ ಅವರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸುವ ಸರ್ಕಾರದ ನಡೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಇತ್ಯರ್ಥಪಡಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಹಶೀಲ್ದಾರ ಶಂಕರ ಜಿ.ಎಸ್. ಹೇಳಿದರು.
ಅವರು ತಾಲೂಕಿನ ಅಂತರವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ 32 ಇಲಾಖೆಗಳ ಎಲ್ಲ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸುವ ಸರ್ಕಾರದ ನಡೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧಾರಕಾರ್ಡ ತಿದ್ದುಪಡಿ, ಪಡಿತರಚೀಟ ತಿದ್ದುಪಡಿ ಸರಿಪಡಿಸಿ, ವೃದ್ಧರ, ವಿಧವೆಯರ, ಅಂಗವಿಕಲರ ಮಾಶಾಸನಗಳನ್ನು ಸ್ಥಳದಲ್ಲಿಯೇ ಮಂಜೂರಾತಿ ನೀಡಲಾಗುವುದು. ಮಾಜಿ ಸಿಎಂ ಯಡಿಯೂರ್ಪನವರು ಪ್ರತಿ ತಿಂಗಳು ಮೂರನೇಯ ಶನಿವಾರ ಪ್ರತಿ ತಾಲೂಕಿನ ಒಂದು ಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳು ವಾಸ್ತವ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದರು. ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ. ಅವರ ಆಶಾಭಾವನೆಯ ಮೂಲಕ ಇಂದು ಅಂತರವಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಬಗೆ ಹರಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಸವಿತಾ ಹೂಲಿಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಮಲ್ಲಪ್ಪ ಮತ್ತೂರ, ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ, ತಾಪಂ ಇಓ ಟಿ.ಆರ್. ಮಲ್ಲಾಡದ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎನ್. ಗುರುಪ್ರಸಾದ, ಪಶುಪಾಲನ ಇಲಾಖೆಯ ಡಾಽ ಪರಮೇಶ ಹುಬ್ಬಳ್ಳಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಿಂಗರಾಜ ಸುತ್ತಕೋಟಿ, ಪಿಡಿಓ ಬಿ.ಎಸ್.ಪಾಟೀಲ, ರಾಮಣ್ಣ ಬಜಾರಿ, ಕುಪ್ಪೇಲೂರ ಹೊಬಳಿಯ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪಿಡಿಓಗಳು 18 ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ನಂತರ ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಸಂಬಂದಿಸಿದ ಅಧಿಕಾರಿಗಳು ಸ್ವೀಕರಿಸಿದರು. ತದನಂತರ ತಹಶೀಲ್ದಾರ ಶಂಕರ ಜಿ.ಎಸ್ ಅವರು ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಿ ಪರಿಹಾರ ನೀಡಲು ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆ ಇದ್ದವರಿಗೆ ಮನೆ, ಇಲ್ಲದವರಿಗೆ ಮನೆ ನೀಡಿಲ್ಲ, ಪಹಣಿ ತಿದ್ದುಪಡಿ, ಪೋತಿ ವಾರಸಾ, ಪಿಂಚಣಿ ನೀಡಿಲ್ಲ, ಮನೆ ಹಾನಿ, ಬೆಳೆ ಹಾನಿ, ಅಂತ್ಯ ಸಂಸ್ಕಾರಕ್ಕೆ ಹಣ ನೀಡಿಲ್ಲ, ಆಧಾರ ಕಾರ್ಡ ತಿದ್ದುಪಡಿ, ಪಡಿತರಚೀಟ ತಿದ್ದುಪಡಿ ಸರಿಪಡಿಸಿ, ವೃದ್ದಾಪ್ಯ, ಸಂಧ್ಯಾ ಸುರಕ್ಷಾ, ವಿಧವೆಯರ, ಅಂಗವಿಕಲರ ಮಾಶಾಸನ ಸರಿಯಾಗಿ ನೀಡುತ್ತಿಲ್ಲ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ, ರೈತರ ಆತ್ಮಹತ್ಯೆಯ ಪರಿಹಾರ ನೀಡಿಲ್ಲ, ಬೆಂಕಿಯಿಂದ ಬೆಳೆ ಹಾನಿಯಾಗಿದೆ, ದಾರಿ ಸಮಸ್ಯೆ, ಸರ್ಕಾರಿ ಜಮೀನು ಒತ್ತುವರಿ, ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲ, ಪಶು ಆಸ್ಪತ್ರೆ ಇಲ್ಲ ಸೇರಿದಂತೆ ಹಲವಾರ ಕುಂದು ಕೊರತೆಯ ಅರ್ಜಿಗಳನ್ನು ಸಾರ್ವಜನಿಕರು ಅಧಿಕಾರಿಗಳಲ್ಲಿ ಸಲ್ಲಿಸಿದರು.
ಬಂದ 75 ಅರ್ಜಿಗಳಲ್ಲಿ 35 ಅರ್ಜಿಗಳಿಗೆ ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು. ಶಿಕ್ಷಣ ಇಲಾಖೆ 4, ಕೃಷಿ ಇಲಾಖೆ 12, ಸಣ್ಣ ನಿರಾವರಿ ಇಲಾಖೆ 5, ಸಮಾಜ ಕಲ್ಯಾಣ ಇಲಾಖೆ 1, ಕೆಇಬಿ 3, ಸರ್ವೆ ಇಲಾಖೆ 6, ಜಿಪಂ ಇಂಜಿನಿಯರಿಂಗ್ ಉಪವಿಭಾಗ 3, ಕಂದಾಯ ಇಲಾಖೆಯ 40, ಅಂಗವಿಕಲರಿಗೆ ಯಂತ್ರಚಾಲಿತ ವಾಹನ 1, ವೃಧ್ಯಾಪ್ಯ, ಸಂಧ್ಯಸುರಕ್ಷಾ, ವಿಧವೆಯರ, ಅಂಗವಿಕಲರ ಮಾಶಾಸನದ ಮಂಜುರಾತಿ ಪತ್ರವನ್ನು ಫಲಾನುಭವಿಗಳಿಗೆ ಸ್ಥಳದಲ್ಲಿಯೇ ವಿತರಿಸಲಾಯಿತು.