ಪೀಡೆನಾಶಕಗಳ ಸುರಕ್ಷಿತ ವಿವೇಚನಾಯುಕ್ತ ಬಳಕೆ: ಡಾ. ಹಿರೇಮಠ
ಲೋಕದರ್ಶನ ವರದಿ
ನೇಸರಗಿ 08: ಬೈಲಹೊಂಗಲ ತಾಲೂಕಿನ ನೇಸರಗಿ ಹೋಬಳಿಯ ಮರಕಟ್ಟಿ ಮತ್ತು ಸಂಪಗಾಂವ ಗ್ರಾಮಗಳಲ್ಲಿ ಅಧಿಕ ಪೀಡೆನಾಶಕ ಬಳಕೆ ಪ್ರದೇಶಗಳಲ್ಲಿ ಪೀಡೆನಾಶಕಗಳ ಸುರಕ್ಷಿತ ವಿವೇಚನಾಯಕ್ತ ಬಳಕೆ ಕುರಿತು ರೈತರ ಜಾಗೃತಿ ಕಾರ್ಯಕ್ರಮವನ್ನು ಕೃಷಿ ಇಲಾಖೆ ಬೈಲಹೊಂಗಲ, ರೈತ ಸಂಪಕ ಕೇಂದ್ರ, ನೇಸರಗಿ ಹಾಗೂ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇವರ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ, ಅವರು ರೈತರು ಬೆಳೆಗಳಲ್ಲಿ ಸಿಂಪಡನೆ ಮಾಡುವ ಸಮಯದಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು, ಮುಖಕ್ಕೆ ಮಾಸ್ಕ, ಕೈಗಳಿಗೆ ಗ್ಲೌಸ್, ಕಣ್ಣುಗಳಿಗೆ ಕನ್ನಡಕ ಮುಂತಾದವುಗಳನ್ನು ಧರಸಿಕೊಂಡು ಸಿಂಪಡನೆ ಕೈಗೊಳ್ಳಬೇಕು ಇದರಿಂದ ರೈತರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳು ಬೀರುವುದಿಲ್ಲ ಎಂದು ಮಾಹಿತಿ ನೀಡಿದರು ಮತ್ತು ರೈತರು ಅವಶ್ಯಕತೆಗೆ ಅನುಗುಣವಾಗಿ, ಸರಿಯಾದ ಸಮಯದಲ್ಲಿ, ಸರಿಯಾದ ಕೀಟನಾಶಕವನ್ನು ಸರಿಯಾದ ವಿಧಾನದಲ್ಲಿ ಸಿಂಪರಣೆ ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದರು.
ಜೈವಿಕ ಪೀಡೆನಾಶಕಗಳಾದ ಟ್ರೈಕೊಡರ್ಮಾ, ಮೆಟರೈಜಿಯಂ, ನುಮೋರಿಯಾ ರಿಲೈ, ಬೆವರಿಯಾ ಬೆಸಿನಾ ಮುಂತಾದವುಗಳನ್ನು ಕೃಷಿಯಲ್ಲಿ ಹೆಚ್ಚಾಗಿ ಬಳಕೆ ಮಾಡುವುದರಿಂದ ಕೀಟನಾಶಕಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಿ, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಆರ್. ಐ. ಕುಂಬಾರ ಅವರು ಮಾತನಾಡಿ,
ಕೃಷಿ ಇಲಾಖೆ ಯೋಜನೆಗಳ ಕುರಿತು ಮಾಹಿತಿ ನೀಡಿದರು ಮತ್ತು ಓಷಧಿ ಸಿಂಪರಣೆ ಮಾಡುವಾಗ ರೈತರು ದಯವಿಟ್ಟು ಸೂಕ್ತ ಸುರಕ್ಷಾ ಕ್ರಮಗಳನ್ನು ಅನುಸರಿಸುವುದು ಹಾಗೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಸಿಂಪರಣೆ ಕೈಗೊಳ್ಳಬಾರದು ಎಂದು ತಿಳಿಸಿದರು. ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರದೀಪ ಮುಗಬಸವ ಅವರು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ರೈತರು ಮತ್ತು ರೈತರ ಮಹಿಳೆಯರು ಭಾಗವಹಿಸಿದ್ದರು.