ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಘಟ್ಟ
ಕೆರೂಟಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಬೋಧಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಆರೀಫ್ ಬಿರಾದಾರ
ಸಿಂದಗಿ 20: ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಘಟ್ಟವಾಗಿದ್ದು, ಈ ಪರೀಕ್ಷೆಯಲ್ಲಿಉತ್ತಮ ಸಾಧನೆ ಮಾಡಿದರೆ, ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಹೇಳಿದರು.
ತಾಲೂಕಿನ ಕೆರೂಟಗಿ ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯ ಬೋಧನೆ ಮಾಡಿ ನಂತರ ಅವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಮಾತನಾಡಿದರು.
ಜೀವನದಲ್ಲಿ ಶಿಕ್ಷಣ ಹಾಗೂ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಮರೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶಿಕ್ಷಕರು ಸಾಧನೆ ಮಾಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಬಾರತದ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ಮಾಡಬಹುದು. ಮುಂಬರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡುವುದರ ಜೊತೆಗೆ ತಾಲೂಕನ್ನು ಶೈಕ್ಷಣಿಕವಾಗಿ ಉನ್ನತ ಸ್ಥಾನಕ್ಕೆ ಏರಿಸಬೇಕು ಎಂದು ಹೇಳಿದರು.
ಮನುಷ್ಯನ ಮೆದುಳಿನ ಸಾಮರ್ಥ್ಯಕ್ಕೆ ಮಿತಿಯೇ ಇಲ್ಲ. ಅದು ಎಷ್ಟು ವಿಷಯ, ಮಾಹಿತಿ ಬೇಕಾದರೂ ಗ್ರಹಿಸಬಲ್ಲದು. ಆದರೆ, ಮೆದುಳಿಗೆ ಸೂಕ್ತ ವಿಶ್ರಾಂತಿ ಮತ್ತು ಕೆಲಸ ಕೊಡುವುದು ಅಷ್ಟೆ ಮುಖ್ಯವಾಗಿದೆ. ಆಗ ಮೆದುಳು ಸ್ಮರಣ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳು ರಾತ್ರಿ ಪೂರ್ತಿ ಓದಿದರೆ ಯಾವುದೇ ಪ್ರಯೋಜನವಾಗದು. ಹೀಗಾಗಿ ಬೆಳಗಿನ ಜಾವ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಪೋಷಕರು ತಮ್ಮ ಮಕ್ಕಳಿಗೆ ಬೆಳಗ್ಗೆ ಉತ್ತಮ ಆಹಾರ ನೀಡಬೇಕು. ಗ್ಲುಕೋಸ್ ಪ್ರಮಾಣ ಕಡಿಮೆ ಆದಾಗ ಮೆದುಳಿಗೆ ಆಯಾಸವಾಗಿ ತೂಕಡಿಕೆ ಬರುತ್ತದೆ. ಪರೀಕ್ಷೆ ಎನ್ನುವುದು ಸ್ಮರಣ ಶಕ್ತಿಯ ಮೂಲಕ ಓದಿದ ವಿಷಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ವಿಧಾನ. ವಿದ್ಯಾರ್ಥಿಗಳು ಓದಿದ ಬಳಿಕ ಅದನ್ನು ಸರಿಯಾಗಿ ಪ್ರಸ್ತುತಪಡಿಸಲು ಕಲಿಯಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಪರೀಕ್ಷೆಯನ್ನು ಆಸಕ್ತಿಯಿಂದ ಬರೆಯಬೇಕು ಎಂದರು.
ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಈ ಸಲ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚೆನ್ನಾಗಿ ಸಾಧನೆ ಮಾಡಬೇಕು. ಉತ್ತಮವಾಗಿ ಅಧ್ಯಯನ ಮಾಡುವ ಮೂಲಕ ಹಳ್ಳಿಯ ಮಕ್ಕಳು ಮುಂಬರುವ ದಿನಗಳಲ್ಲಿ ಐಎಎಸ್ ಮತ್ತು ಕೆಎಎಸ್ ಶ್ರೇಣಿಗಳಲ್ಲಿ ಉತ್ತೀಣಗೊಂಡು ಉನ್ನತ ಹುದ್ದೆ ಪಡೆಯುವ ಮೂಲಕ ಜನಸಾಮಾನ್ಯರ ಸೇವೆ ಪ್ರಾಮಾಣಿಕವಾಗಿ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.
ಪ್ರೌಢಶಾಲೆಯ ಮುಖ್ಯೋಧ್ಯಾಪಕ ಎಂ.ಬಿ. ಯಡ್ರಾಮಿ ಮಾತನಾಡಿ, ಮನಶಾಸ್ತ್ರಜ್ಞರ ಪ್ರಕಾರ ಮನುಷ್ಯರು ಸೋಲು ಅನುಭವಿಸಲು ಬಯಸುತ್ತಾರೆ. ಗೆದ್ದರೆ ಇನ್ನಷ್ಟು ಜವಾಬ್ದಾರಿ ಹೊರಬೇಕಾಗುತ್ತದೆ ಎನ್ನುವುದೇ ಇದಕ್ಕೆ ಕಾರಣ. ಗುರಿಯಿಂದ ವಿಚಲಿತರಾಗದೆ ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಬೇಕು. ನಾಳೆ ಓದುತ್ತೇನೆ ಎನ್ನುವ ಮನೋಭಾವ ಬೆಳೆಸಿಕೊಂಡರೆ ಯಾವುದೇ ಪ್ರಯೋಜನವಿಲ್ಲ. ಯಾವಾಗ, ಯಾವುದನ್ನು ಓದಬೇಕೋ ಅದನ್ನು ಓದಿದರೆ ಸಮಸ್ಯೆ ಉಂಟಾಗುವುದಿಲ್ಲ. ಪರೀಕ್ಷೆಯ ಸಮಯ ವ್ಯರ್ಥ ಮಾಡದೇ, ಓದಿನತ್ತ ಸಂಪೂರ್ಣ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಕ್ಷೆತ್ರಶಿಕ್ಷಣಾಧಿಕಾರಿ ಆರೀಫ ಬಿರಾದಾರ ಅವರು ಅತ್ಯಂತ ಕ್ರೀಯಾಶೀಲ ಅಧಿಕಾರಿಗಳಾಗಿದ್ದು ಅವರು ಯಾವುದೇ ಪ್ರೌಢಶಾಲೆಗೆ ಪರೀಶೀಲನೆಗೆ ಹೊದ ಸಂದರ್ಭದಲ್ಲಿ ಆ ಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡದೇ ಬರುವುದಿಲ್ಲ. ಅವರ ಮಾರ್ಗದರ್ಶನದಂತೆ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಾಲೂಕಿಗೆ, ಜಿಲ್ಲೆಗೆ ಕೀರ್ತಿ ತರಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರೌಢಶಾಲೆಯ ಸಹಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ನಂತರ ದೇವರಹಿಪ್ಪರಗಿ ತಾಪಂ ಇಓ ಭಾರತಿ ಚಲುವಯ್ಯ, ನರೆಗಾ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ಕ್ಷೇತ್ರಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಸಂಪನ್ಮೂಲ ವ್ಯಕ್ತಿ ವಾಯ್.ಬಿರಾದಾರ ಅವರು ಪ್ರೌಢಶಾಲೆಯಲಿನ ಗಣಿತ ಮತ್ತು ವಿಜ್ಞಾನ ಪ್ರಯೋಗಾಲಯಗಖನ್ನು ವಿಕ್ಷಣೆ ಮಾಡಿದರು. ನಂತರ ಮಧ್ಯಾಹ್ನದ ಬಿಸಿಊಟ ಸೇವಿಸಿ ಅಡುಗೆ ರುಚಿ-ಶುಚಿ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡೆಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರತಿ ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಘಟ್ಟವಾಗಿದ್ದರಿಂದ ಪರೀಕ್ಷಯನ್ನು ಆತ್ಮವಿಶ್ವಾಸದಿಂದ ದಾಟಬೇಕು. ಪರೀಕ್ಷೆ ಭಯ ಇರುವುದು ಸಾಮಾನ್ಯವಾದರೂ ಸೂಕ್ತ ಸಂದರ್ಭ ಸೂಕ್ತ ಮಾರ್ಗದರ್ಶನ ಸಿಕ್ಕರೆ ಭಯ ಮೆಟ್ಟಿ ನಿಂತು ಸಾಧನೆ ಮಾಡಲು ಸಾಧ್ಯ. ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಬೇಕು, ಆಗ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯ. 2024ರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ಮೂಲಕ ತಾಲೂಕನ್ನು ರಾಜ್ಯಕ್ಕೆ ಮಾದರಿಯಾಗಿಸುವಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಪಾತ್ರ ಹಿರಿಯದಗಿದೆ.
-ಆರೀಫ್ ಬಿರಾದಾರ, ಕ್ಷೇತ್ರಶಿಕ್ಷಣಾಧಿಕಾರಿ, ಸಿಂದಗಿ