ರಾಣೆಬೆನ್ನೂರ

ಕುಡಿಯವ ನೀರಿಗಾಗಿ ಪರಿತಪಿಸುತ್ತಿರುವ ಗ್ರಾಮೀಣ ನಾಗರೀಕರು

ಕುಡಿಯವ ನೀರಿಗಾಗಿ ಪರಿತಪಿಸುತ್ತಿರುವ ಗ್ರಾಮೀಣ ನಾಗರೀಕರು

ಲೋಕದರ್ಶನ ವರದಿ 

ರಾಣೇಬೆನ್ನೂರು 08:  ಕಳೆದ ಒಂದೂವರೆ ವರ್ಷದಿಂದ ಕೆಟ್ಟು ನಿಂತ ತಾಲೂಕಿನ ಕೂನಬೇವು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಇಂದಿನವರೆಗೂ ರಿಪೇರಿ ಭಾಗ್ಯ ಕೂಡಿ ಬಂದಿಲ್ಲ. ಶುದ್ದ ಕುಡಿಯುವ ನೀರನ್ನೇ ನಂಬಿ ಅದೇ ನೀರಿಗೆ ಒಗ್ಗಿಕೊಂಡಿರುವ ಗ್ರಾಮಸ್ಥರು ಇತರೆ ನೀರನ್ನು ಕುಡಿದು ದಿನನಿತ್ಯ ಒಂದಿಲ್ಲೊಂದು ಖಾಯಿಲೆಗೆ ತುತ್ತಾಗಿ ಆಸ್ಪತ್ರೆಯ ಬಾಗಿಲು ತಟ್ಟುವಂತಾಗಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆಯವರು ಶೀಘ್ರದಲ್ಲಿಯೇ ಶುದ್ದ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮದ ಮುಖಂಡ ಹಾಗೂ ರೇಣುಕಾದೇವಿ ಯಲ್ಲಮ್ಮ ಭಜನಾ ಸಂಘದ ಸದಸ್ಯ ಬಸವರಾಜ ಕೂರಗುಂದ ಒತ್ತಾಯಿಸಿದ್ದಾರೆ. 

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪಂಚಾಯತ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಡಿಯಲ್ಲಿ 2016-17ನೇ ಅನುದಾನದಡಿಯಲ್ಲಿ ನಿರ್ಮಿಸಲಾಗಿದ್ದ ಈ ಶುದ್ದ ಕುಡಿಯುವ ನೀರಿನ ಘಟಕದ ನಿರ್ವಹಣೆಯನ್ನು ದೇವರಗುಡ್ಡದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೊಸೈಟಿಯು ವಹಿಸಿಕೊಂಡಿತ್ತು. ಮೊದಮೊದಲಿಗೆ ಇದರ ನಿರ್ವಹಣೆ ಸರಿಯಾಗಿಯೇ ಇತ್ತು. ಆದರೆ, ಈಗ ಒಂದೂವರೆ ವರ್ಷದಿಂದ ಅವರೆಲ್ಲರ ನಿಷ್ಕಾಳಜಿ ಮತ್ತು ಬೇಜವಾಬ್ದಾರಿತನದಿಂದ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ನಿಂತರೂ, ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತ ಸರಿಪಡಿಸುತ್ತಿಲ್ಲ ಎಂದರು. 

ಈ ಶುದ್ದ ಕುಡಿಯುವ ನೀರಿನ ಘಟಕವು ಕೂನಬೇವು ಗ್ರಾಮಕ್ಕಷ್ಟೇ ಅಲ್ಲದೆ, ಸುತ್ತಮುತ್ತಲಿನ ಗ್ರಾಮಗಳಾದ ಕಜ್ಜರಿ, ಹೂಲಿಹಳ್ಳಿ ಮತ್ತು ರೈಲ್ವೆ ಇಲಾಖೆಯಲ್ಲಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳೆಲ್ಲರಿಗೂ ವರದಾನವಾಗಿ ಪರಿಣಮಿಸಿತ್ತು. ಸದ್ಯ ಶುದ್ದ ಕುಡಿಯುವ ನೀರಿನ ಘಟಕ ನಿಷ್ಕ್ರಿಯಗೊಂಡು ನಿಂತಿರುವುದರಿಂದ ಆ ಕಟ್ಟಡದ ಎದುರು ಸೆಳೆದ ಬಟೆಯನ್ನು ಒಣ ಹಾಕುವುದು ಮತ್ತು ದನ ಕರುಗಳನ್ನು ಕಟ್ಟುವ ಕಾರ್ಯ ನಡೆದಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಗಳು ಈ ಮಹತ್ತರ ಯೋಜನೆಯನ್ನು ಜಾರಿಗೆ ತಂದಿದ್ದರೂ ಕೂಡ ಕೂನಬೇವು ಗ್ರಾಮಕ್ಕೆ ಮಾತ್ರ ಅದು ಅನ್ವಯಿಸುತ್ತಿಲ್ಲ. ಇದನ್ನು ನಿರ್ವಹಣೆ ಮಾಡುವವರು ಮಾತ್ರ ಒಂದಲ್ಲ ಒಂದು ಕಾರಣ ಹೇಳುತ್ತ ಕಾಲವನ್ನು ತಳ್ಳುತ್ತಿದ್ದಾರೆಯೇ ವಿನಃ ಸರಿಪಡಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ. 

ಕುಡಿಯುವ ನೀರಿನಿಂದಲೇ ಒಂದಲ್ಲ ಒಂದು ಖಾಯಿಲೆ ಬರುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡ ಸರ್ಕಾರಗಳು ಪ್ರತಿ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿವೆ. ಆದರೆ, ಕೂನಬೇವು ಗ್ರಾಮದಲ್ಲಿ ಮಾತ್ರ ಸರ್ಕಾರದ ಮಹತ್ತರ ಯೋಜನೆಗಳು ನಿರ್ವಹಣೆ ಮಾಡುವವರ ಅವಿವೇಕತನ ಮತ್ತು ಬೇಜವಾಬ್ದಾರಿತನದಿಂದ ನಿಷ್ಪ್ರಯೋಜನಗೊಳ್ಳುತ್ತಿವೆ. ದೇವರಗುಡ್ಡದ ಸೊಸೈಟಿಗೆ ಇದೇ ಗ್ರಾಮದ ನಿವಾಸಿಗಳು ಉಪಾಧ್ಯಕ್ಷರು, ಸದಸ್ಯರುಗಳು ಇದ್ದಾರೆ. ಆದರೆ, ಅವರೆಲ್ಲರ ಕೆಲಸ ಮಾಡುವ ಇಚ್ಚಾಶಕ್ತಿಯ ಕೊರತೆಯಿಂದ ಜನರು ಶುದ್ದ ಕುಡಿಯುವ ನೀರಿಗೆ ಪರದಾಡುವಂತಾಗಿದೆ. 

ಕೂನಬೇವು ಗ್ರಾಮ ಹಾಗೂ ತಾಂಡಾ ಸೇರಿದಂತೆ ಒಟ್ಟು ಎರಡು ಶುದ್ದ ಕುಡಿಯುವ ನೀರಿನ ಘಟಕಗಳಿದ್ದು, ತಾಂಡಾದಲ್ಲಿರುವ ಘಟಕ ಸಮರ​‍್ಕವಾಗಿ ಕೆಲಸ ನಿರ್ವಹಿಸುತ್ತಿದೆ. ಅದು ತಾಂಡಾದ ಜನತೆಗೆ ಮಾತ್ರ ವರದಾನವಾಗಿದೆ. ಗ್ರಾಮದಲ್ಲಿನ ಘಟಕ ಕಳೆದ ಒಂದೂವರೆ ವರ್ಷದಿಂದ ಕೆಟ್ಟು ನಿಂತಿರುವುದರಿಂದ ಶುದ್ದ ಕುಡಿಯುವ ನೀರಿಗೇ ಒಗ್ಗಿಕೊಂಡಿರುವ ಕೆಲವು ಜನತೆ ನಡೆದುಕೊಂಡೇ ತಾಂಡಾಕ್ಕೆ ಹೋಗಿ ಕೊಡಗಳನ್ನು ಹೊತ್ತು ತರುವ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಗ್ರಾಮದಲ್ಲೇ ಇರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಕೂಡಲೇ ಸರಿಪಡಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ಬಸವರಾಜ ಕೂರಗುಂದ ಎಚ್ಚರಿಸಿದ್ದಾರೆ. 

ಮಾಧ್ಯಮ ಗೋಷ್ಟಿಯಲ್ಲಿ ಕಿರಣ ಅಣಜಿ, ಸಂತೋಷ ಅಣಜಿ, ರಾಜು ಬೂದನೂರ, ಗುಡ್ಡನಗೌಡ ಪಾಟೀಲ, ನಾಗರಾಜ ಬಡಿಗೇರ, ಚನ್ನಬಸನಗೌಡ ಪಾಟೀಲ, ಮೈಲಾರ​‍್ಪ ನೆಗಳೂರ, ಬಸವರಾಜ ತಂಡೂರ, ಸತೀಶ್ ಅಣಜಿ, ಪ್ರವೀಣ ಅಣಜಿ ಮತ್ತಿತರರು ಇದ್ದರು. 


ಸುದ್ದಿ ಓದಿ