ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ರೂ. 95 ಕೋಟಿ ಮಂಜೂರು
ಶಾಸಕ ಮಹಾಂತೇಶ ಕೌಜಲಗಿ ಹೇಳಿಕೆ: ಸಗಟು ನೀರು ಸರಬರಾಜು ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಬೈಲಹೊಂಗಲ 13: ಪಟ್ಟಣದ ಜನತೆಗೆೆ 24/7 ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ರೂ. 95 ಕೋಟಿ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಿಸಲಾಗುತ್ತಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಅವರು ಗುರುವಾರ ಪಟ್ಟಣದ ಪುರಸಭೆಯ ಆವರಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿಯ ಯೋಜನೆಯಡಿ ಪಟ್ಟಣಕ್ಕೆ 24/7 ನೀರು ಸರಬರಾಜು ವಿತರಣಾ ಜಾಲ ಅಳವಡಿಸುವ, ಸಗಟು ನೀರು ಸರಬರಾಜು ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ, 2020-21 ನೇ ಸಾಲಿನ 15 ನೇ ಹಣಕಾಸು ಆಯೋಗ ಅನುದಾನದಡಿ ಒಳಚರಂಡಿ ನಿರ್ವಹಣೆಗೆ ಸಕ್ಕಿಂಗ್ ಕಂ. ಜೆಟ್ಟಿಂಗ್ ಮಶಿನ್, ಸ್ವಚ್ಛ ಭಾರತ ಮಿಶನ್ ಅನುದಾನದಡಿ ಮನೆ, ಮನೆ ಕಸ ಸಂಗ್ರಹಣೆ ಮಾಡಲು ಅಟೋ ಟಿಪ್ಪರ್ ವಾಹನಗಳಿಗೆ ಪೂಜೆ ನೆರವೇರಿಸಿ ಮಾತನಾಡಿ, ಪ್ರತಿಯೊಂದು ಮನೆಯ ನಲ್ಲಿಗಳಿಗೆ ಮೀಟರ್ ಆಳವಡಿಸಿ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಪುರಸಭೆಯ ಪಿಲ್ಟರ್ ಹೌಸನಲ್ಲಿ 10 ಲಕ್ಷ ಲೀಟರ್ ಸಾಮರ್ಥದ ಒವರ್ ಹೆಡ್ ಟ್ಯಾಂಕ್, ಮಾಟೊಳ್ಳಿ ಹತ್ತಿರ ನೂತನ ನೀರೆತ್ತುವ ಜಾಕವೆಲ್ ನಿರ್ಮಾಣ ಕಾಮಗಾರಿ ಕೈಕೊಳ್ಳಲಾಗುವದು ಎಂದರು.
2011 ರ ಜನಗಣತಿ ಪ್ರಕಾರ ಪಟ್ಟಣದಲ್ಲಿ 49182 ಜನಸಂಖ್ಯೆ ಇದ್ದು, ಹಾಲಿ ಸಂಖ್ಯೆ ಸುಮಾರು 60 ಸಾವಿರ ಮಿಕ್ಕಿದ್ದು, ಜನತೆಗೆ ಜೀವನಾಡಿಯಾಗಿರುವ ಮಲಪ್ರಭಾ ನದಿ ಮೂಲದಿಂದ ನೀರು ಸರಬರಾಜು ಆಗುತ್ತಿದ್ದು ಮೊದಲನೆ ನೀರು ಸರಬರಾಜು 1956 ರಲ್ಲಿ, ಎರಡನೆ ಹಂತ 2002 ರಲ್ಲಿ, ಮೂರನೆ ಹಂತ 2014 ರಲ್ಲಿ ಚಾಲನೆಗೊಂಡಿದ್ದು ಈ ಯೋಜನೆ 2041 ರ ವರೆಗೆ 1 ಲಕ್ಷ 5 ಸಾವಿರ ಜನಸಂಖ್ಯೆಗೆ ಪ್ರತಿ ದಿನ ತಲಾ 135 ಲೀಟರನಂತೆ ಸರಬರಾಜು ಪರಿಗಣಿಸಿ ವಿನ್ಯಾಸಗೊಳಿಸಲಾಗಿದೆ. ಸದರೀ ಯೋಜನೆಗೆ 27196 ಮೀಟರ್ ಉದ್ದದ ನೀರು ಪೈಪಲೈನ್ ಅಳವಡಿಸಲಾಗುತ್ತಿದೆ ಎಂದರಲ್ಲದೇ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಕೊಂಡು ಜನತೆಗೆ ಅನುಕೂಲ ಮಾಡಿಕೊಡಬೇಕೆಂದರು.
ಪುರಸಭೆ ಅಧ್ಯಕ್ಷ ಬಾಬು ಬಸಪ್ಪ ಕುಡಸೋಮಣ್ಣವರ ಮಾತನಾಡಿ, ಶಾಸಕ ಮಹಾಂತೇಶ ಕೌಜಲಗಿ ಅವರ ಸತತ ಪ್ರಯತ್ನದಿಂದ ಪಟ್ಟಣ ಜನತೆಗೆ ಶಾಶ್ವತ ಕುಡಿಯುವ ನೀರು ಯೋಜನೆ ಮಂಜೂರು ಆಗಿದ್ದು ಇದರಿಂದ ಜನತೆಗೆ ಅನುಕೂಲವಾಗಲಿದೆ. ಪಟ್ಟಣದ ದೊಡ್ಡ ಕೆರೆಯ ಸಮಗ್ರ ಅಭಿವೃದ್ದಿಗೆ ರೂ.9.5 ಕೋಟಿ ವೆಚ್ಚದಲ್ಲಿನ ಕಾಮಗಾರಿ ಪ್ರಗತಿಯಲ್ಲಿದೆ. ಪಟ್ಟಣದ ಪ್ರಮುಖ ರಸ್ತೆಗಳನ್ನು ಅಭಿವೃದ್ದಿಪಡಿಸಿ ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿ ಮಾಡಲು ಶಾಸಕರ ಮಹಾದಾಸೆಯಾಗಿದ್ದು ಜನತೆಗೆ ಮೂಲಭೂತ ಸೌಲಭ್ಯ ಒದಗಿಸಲು ಹೆಚ್ಚಿನ ಒತ್ತು ನೀಡುತ್ತಿರುವ ಕಾರ್ಯ ಹರ್ಷದಾಯಕವಾಗಿದೆ ಎಂದರು.
ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಪುರಸಭೆ ಮುಖ್ಯಾಧಿಕಾರಿ ಕವಿರಾಜ ನಾಗನೂರ, ಜಲಮಂಡಳಿ, ಒಳಚರಂಡಿ ವಿಭಾಗದ ಇಇ ಸುರೇಶ ಮಾರನಾಳ, ಉಪಾಧ್ಯಕ್ಷೆ ಶಶಿಕಲಾ ಮಲ್ಲೇಶಿ ಹೊಸಮನಿ, ವಿಪಕ್ಷ ನಾಯಕ ಸುಧೀರ ವಾಲಿ, ಸದಸ್ಯರಾದ ರಾಜಶೇಖರ ಮೂಗಿ, ಬಸವರಾಜ ಜನ್ಮಟ್ಟಿ, ಗುರು ಮೆಟಗುಡ್ಡ, ವಿಜಯ ಬೋಳನ್ನವರ, ಶಿವಬಸ್ಸು ಕುಡಸೋಮನ್ನವರ, ಶಿವಾನಂದ ಕೋಲಕಾರ, ಉಳವಪ್ಪ ಬಡ್ಡಿಮನಿ, ಸಾಗರ ಭಾವಿಮನಿ, ಸದ್ರುದ್ದಿನ ಅತ್ತಾರ, ಬುಡ್ಡೆಸಾಬ ಶಿರಸಂಗಿ, ಅಮೀರಬಿ ಬಾಗವಾನ, ಶ್ರೀದೇವಿ ದೇವಲಾಪುರ, ಹೇಮಲತಾ ಹಿರೇಮಠ, ಪ್ರೇಮಾ ಇಂಚಲ, ಲಕ್ಷ್ಮಿ ಬಡ್ಲಿ, ಉಮಾ ಹೊಸೂರ, ಅಂಜನಾ ಬೊಂಗಾಳೆ, ದಿಲಶಾದ ನದಾಫ, ಶಶಿಕಲಾ ಕಲ್ಲೋಳಿ, ಅಂಬಿಕಾ ಪ್ರಕಾಶ ಕೊಟಬಾಗಿ, ವಾಣಿ ಪತ್ತಾರ, ಲತೀಫಾಬೇಗಂ ಮುಲ್ಲಾ, ರುದ್ರ್ಪ ಹೊಸಮನಿ, ಮಹೇಶ ಹರಕುಣಿ, ಸುಷ್ಮಾ ಗುಂಡ್ಲೂರ, ಬಸವರಾಜ ಶಿಂತ್ರಿ, ಪುರಸಭೆ ಅಭಿಯಂತರ ಆಯ್. ವಿ. ಕೊಂಗವಾಡ, ಸಿಬ್ಬಂದಿ, ಕಾರ್ಮಿಕರು ಇದ್ದರು.
ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ರಾಜ್ಯದ ಪ್ರತಿ ಪುರಸಭೆಗೆ ರೂ. 10 ಕೋಟಿ ಹಣ ಅನುದಾನ ನೀಡಲು ನಿರ್ಧರಿಸಲಾಗಿದ್ದು, ಪಟ್ಟಣದ ಸವಾಂಗೀಣ ಅಭಿವೃದ್ಧಿಗೆ ಕ್ರೀಯಾ ಯೋಜನೆ ರೂಪಿಸಿ ಕಾಮಗಾರಿ ಕೈಕೊಂಡು ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಲಾಗುವದು.ಶ್ರಿಮಹಾಂತೇಶ ಕೌಜಲಗಿ ಶಾಸಕರು
ಸರಕಾರ 95 ಕೋಟಿ ರೂ. ಅನುದಾನ ನೀಡಿ, 24/7 ಯೋಜನೆಯನ್ನು ಮಂಜೂರಿಸಿದೆ. ಇಷ್ಟೊಂದು ದೊಡ್ಡ ಮಟ್ಟದ ಕಾಮಗಾರಿಯನ್ನು ನಿಗಮದ ಅಧ್ಯಕ್ಷ, ಸಚಿವರನ್ನು ಕರೆ ಸಿ ಕಾಮಗಾರಿ ಉದ್ಘಾಟಿಸಿದ್ದರೆ ಶೋಭೆ ಬರುತ್ತಿತ್ತು. ತರಾತುರಿಯಲ್ಲಿ ಶಾಸಕರು ಕಾಮಗಾರಿಗೆ ಚಾಲನೆ ನೀಡುತ್ತಿರುವದು ಸರಿಯೇ?
ಮಹೇಶ ಹರಕುಣಿ
ಸರಕಾರ ನಾಮನಿರ್ದೇಶಿತ ಸದಸ್ಯ