ಜನ ಕಲ್ಯಾಣಕ್ಕಾಗಿ ರೋಟರಿ ಸಂಸ್ಥೆ ಕೆಲಸ ಮಾಡುತ್ತ ಬಂದಿದೆ: ಶಾಸಕ ಲಕ್ಷ್ಮಣ ಸವದಿ
ಅಥಣಿ 08: ರೋಟರಿ ಸಂಸ್ಥೆಯು ಹಲವಾರು ವರ್ಷಗಳಿಂದ ಬಡವರ ಪರ, ಜನ ಕಲ್ಯಾಣಕ್ಕಾಗಿ ಸೇವಾ ಕಾರ್ಯಗಳನ್ನು ಮಾಡುತ್ತ ಬರುತ್ತಿದೆ. ಯಾವುದೇ ರೀತಿಯ ಅನಾಹುತ ಘಟನೆಗಳು, ಪ್ರವಾಹ ಬಂದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಇದ್ದು ಸಹಾಯ, ಸಹಕಾರ ನೀಡುವ ಕಾರ್ಯ ಮಾಡಿದೆ ಎಂದು ಮಾಜಿ ಉಪಮುಖ್ಯಮಂತ್ರಿಗಳು, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಪಟ್ಟಣದಲ್ಲಿ ಜರುಗಿದ ರೋಟರಿ ಸಂಸ್ಥೆಯ 25ನೇ ವರ್ಷದ ರಜತಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ರೋಟರಿ ಸಂಸ್ಥೆ ಕಳೆದ 119 ವರ್ಷಗಳಿಂದ ದೇಶದಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಜನ ಸೇವೆಗೆ ಹೆಸರು ಗಳಿಸಿದ ಸಂಸ್ಥೆಯಾಗಿದೆ. ಅಥಣಿಯಲ್ಲಿ ಸುಮಾರು 25 ವರ್ಷಗಳಿಂದ ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಸಲ್ಲಿಸುತ್ತ ಬಂದಿರುವ ಸಂಸ್ಥೆಯ ಎಲ್ಲ ಸದಸ್ಯರನ್ನು ಹಾಗೂ ಸಂಸ್ಥಾಪಕ ಅಧ್ಯಕ್ಷರಾದ ಗಜಾನನ ಮಂಗಸೂಳಿಯವರನ್ನು ಅಭಿನಂದಿಸುವುದಾಗಿ ಹೇಳಿದ ಅವರು ರೋಟರಿ ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು. ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಗಜಾನನ ಮಂಗಸೂಳಿಯವರು ಮಾತನಾಡಿ, ಕಳೆದ 25 ವರ್ಷಗಳಿಂದ ರೋಟರಿ ಸಂಸ್ಥೆಯು ಜನಪರ, ಬಡವರಿಗೆ ನೆರವು ನೀಡುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತ ಬಂದಿದೆ. ಸಂಸ್ಥೆಯ ಅಭಿವೃದ್ಧಿಗೆ, ರೋಟರಿ ಸಂಸ್ಥೆಯ ಜನಸೇವಾ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸಲು ಶಾಸಕ ಲಕ್ಷ್ಮಣ ಸವದಿಯವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾಜಿ ಶಾಸಕರಾದ ಶಹಜಹಾನ್ ಡೊಂಗರಗಾಂವ, ಅಥಣಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಅನಿಲ ದೇಶಪಾಂಡೆ, ಮಾಜಿ ಪುರಸಭೆ ಅಧ್ಯಕ್ಷರು, ಹಾಲಿ ಸದಸ್ಯರಾದ ರಾವಸಾಬ ಐಹೊಳೆ, ಉದ್ಯಮಿಗಳಾದ ರಫೀಕ ಡಾಂಗೆ, ರಾಹುಲ ಗಜಾನನ ಮಂಗಸೂಳಿ ಸೇರಿದಂತೆ ಮತ್ತಿತರ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಬಳಿಕ ಕಾಮಿಡಿ ಕಿಲಾಡಿ ಖ್ಯಾತಿಯ ಕಲಾವಿದರಿಂದ ಜರುಗಿದ ಹಾಸ್ಯ ಹಾಗೂ ವಿವಿಧ ಕಲಾವಿದರ ಸಂಗೀತ, ನೃತ್ಯ ಕಾರ್ಯಕ್ರಮಗಳು ಜನಮನ ರಂಜಿಸಿದವು.