ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಸ್ತೆ ತಡೆ ಪ್ರತಿಭಟನೆ
ಲೋಕದರ್ಶನ ವರದಿ
ಸವದತ್ತಿ 12: ತಾಲೂಕಿನಲ್ಲಿ ರಸಗೊಬ್ಬರ ಹಾಗೂ ಕೀಟನಾಶಕಗಳ ಪೂರೈಕೆ ಮತ್ತು ಹದಗೆಟ್ಟ ರಸ್ತೆಗಳ ಸುಧಾರಣೆ ಮತ್ತು ರೈತರ ಪಂಪಸೆಟ್ಟಗಳಿಗೆ ಮೀಟರ ಅಳವಡಿಕೆ ಮಾಡಬಾರದೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಜನತಾದಳದ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿಯವರ ಮುಖಂಡತ್ವದಲ್ಲಿ ಪಟ್ಟಣ ಎಸ್.ಎಲ್.ಎ.ಓ ಕ್ರಾಸನಲ್ಲಿ ಜನತಾದಳದ ಕಾರ್ಯಕರ್ತರು ಮತ್ತು ಸಿಂಗಾರಗೊಪ್ಪ ಗ್ರಾಮಸ್ಥರು ಸೋಮವಾರದಂದು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಜೆಡಿಎಸ್ ಜಿಲ್ಲಾ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ತಾಲೂಕಿನ ಶಿಂಗಾರಗೊಪ್ಪ ಗ್ರಾಮದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಇದರಿಂದ ಗ್ರಾಮದ ಜನರಿಗೆ ತುಂಬಾ ಕಷ್ಟವಾಗುತ್ತಿದೆ. ತಾಲೂಕಿನಲ್ಲಿ ರೈತರ ಪಂಪಸೆಟ್ಟುಗಳಿಗೆ ಸತತವಾಗಿ ವಿದ್ಯುತ್ತ ಪೂರೈಕೆ ಮಾಡಬೇಕಿದ್ದು, ಪಂಪಸೆಟ್ಟಗಳಿಗೆ ಮೀಟರ್ ಅಳವಡಿಕೆ ಮಾಡುವದನ್ನು ಕೂಡಲೆ ಕೈಬಿಡಬೇಕೆಂದು ಆಗ್ರಹಿಸಿದರು. ರೈತರ ಹೊಲಗಳಿಗೆ ಹೋಗುವ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಕೂಡಲೆ ರಸ್ತೆಗಳ ದುರಸ್ಥಿಕಾರ್ಯವನ್ನು ಹಮ್ಮಿಕೊಳ್ಳಬೇಕೆಂದು ಒತ್ತಾಯಿಸಿದರು.
ನಂತರ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ ಬಿ.ಜಿ.ಜಕ್ಕನಗೌಡರರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಕೂಡಲೆ ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಯನ್ನು ಕೈಬಿಡಲಾಯಿತು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಾದ ಎಚ್.ಎ.ಕದ್ರಾಪೂರಕರ ಹಾಗೂ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿದ್ದನಗೌಡಾ ಪಾಟೀಲ, ಭೀಮಪ್ಪ ಕಂಬಾರ, ಯಾಶಿನ್ ನದಾಫ, ಭರಮಗೌಡಾ ಪಾಟೀಲ, ಉಮೇಶ ತುರಾಯಿ, ಸುರೇಶ ನಿಚ್ಚಣಕಿ, ಶಿವಾನಂದ ಸರದಾರ ಸೇರಿದಂತೆ ಶಿಂಗಾರಗೊಪ್ಪ ಗ್ರಾಮದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.