ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ: ಕನ್ನಡ ಭಾಷಾ ಪ್ರಭೇದಗಳ ಬಳಕೆ
ಹಂಪಿ, :ಪಠ್ಯಪುಸ್ತಕಗಳ ಪರಿಷ್ಕರಣೆ ಸಮಿತಿಯು ಪಠ್ಯಗಳಲ್ಲಿ ಪದ್ಯ, ಗದ್ಯ, ಪಾಠ ಹಾಗೂ ಕವಿಗಳನ್ನು ಬದಲಾಯಿಸುತ್ತಿರುತ್ತದೆಯೇ ಹೊರತು ಭಾಷಾಪ್ರಭೇದಗಳ ವೈವಿಧ್ಯತೆಯ ಅಳವಡಿಕೆಯ ಕುರಿತು ಯೋಚಿಸುವುದಿಲ್ಲ ಎಂದು ಸಂಶೋಧಕ ನಾಗೇಂದ್ರ್ಪ ಪಿ. ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ 19ನೇ ಸೆಪ್ಟೆಂಬರ್ 2024ರ ಗುರುವಾರದಂದು ಹಮ್ಮಿಕೊಂಡಿದ್ದ 265ನೇ ಆನ್ಲೈನ್ ವಾರದಮಾತು ಕಾರ್ಯಕ್ರಮದಲ್ಲಿ “ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ: ಕನ್ನಡ ಭಾಷಾ ಪ್ರಭೇದಗಳ ಬಳಕೆ 1-8ನೇ ತರಗತಿ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ಮುಂದುವರೆದು ಅವರು ಪಠ್ಯಪುಸ್ತಕಗಳಲ್ಲಿ ಪಠ್ಯಗಳ ಸಂಖ್ಯೆ ಹೆಚ್ಚು ಕಡಿಮೆ ಮಾಡುತ್ತಾರೆ. ಆದರೆ ಭಾಷೆಯನ್ನು ಕುರಿತಾಗಿ ಆಸಕ್ತಿ ಮೂಡಿಸುವ ವಿಷಯಗಳನ್ನಾಗಲಿ, ಸಾಧ್ಯತೆಗಳನ್ನಾಗಲಿ ಮಾಡುವುದಿಲ್ಲ. ಕೇವಲ ವ್ಯಾಕರಣಕ್ಕೆ ಹೆಚ್ಚು ಒತ್ತು ಕೊಡುತ್ತಾರೆಯೇ ವಿನಃ ಭಾಷಾ ಪಾಠಗಳಿಗೆ, ಭಾಷಾ ಚಟುವಟಿಕೆಗಳಿಗೆ ಆದ್ಯತೆ ನೀಡುವುದಿಲ್ಲ. ಇದಕ್ಕೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಗ್ರಾಮ್ಯ ಭಾಷೆ ಮತ್ತು ಆಡುಭಾಷೆಗಳ ಬಗ್ಗೆ ಹೊಂದಿರುವ ಕೀಳರಿಮೆಯೇ ಕಾರಣ ಎಂದರು.
ಇದನ್ನು ಹೋಗಲಾಡಿಸಲು ಪಠ್ಯಪುಸ್ತಕಗಳ ಪರಿಷ್ಕರಣೆ ಸಮಿತಿಯು ಭಾಷಾಪ್ರಭೇದಗಳ ಕುರಿತು ಆಸಕ್ತಿವಹಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ.ಪಿ.ಮಹಾದೇವಯ್ಯ ಅವರು, ಸಂಶೋಧನಾರ್ಥಿ ಪಂಪಾಪತಿ ಅವರು ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮದ ಸಂಚಾಲಕರಾದ ಚೌಡಪ್ಪ ಪಿ, ಅಂಬಿಕಾ, ಶಿಲ್ಪಾ ಉಪಸ್ಥಿತರಿದ್ದರು. ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾ ವಿದ್ಯಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಭಾಗವಹಿಸಿದ್ದರು.