ರಾಷ್ಟ್ರೀಯ

ರಿಸರ್ವ್ ಬ್ಯಾಂಕ್‍ನಿಂದ ರಿವರ್ಸ್ ರೆಪೊ ದರ ಶೇ 0.25ರಷ್ಟು ಕಡಿತ: ರೆಪೊ ದರ ಯಥಾಸ್ಥಿತಿ

ರಿಸರ್ವ್  ಬ್ಯಾಂಕ್‍ನಿಂದ ರಿವರ್ಸ್ ರೆಪೊ ದರ ಶೇ 0.25ರಷ್ಟು ಕಡಿತ: ರೆಪೊ ದರ ಯಥಾಸ್ಥಿತಿ

 ಮುಂಬೈ, ಏಪ್ರಿಲ್ 17,ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ರಿವರ್ಸ್ ರೆಪೊ ದರ (ಬ್ಯಾಂಕ್‍ಗಳು ರಿಸರ್ವ್  ಬ್ಯಾಂಕ್‍ನಲ್ಲಿ ಇರಿಸುವ ಹಣದ ಮೇಲಿನ ಬಡ್ಡಿದರ)ವನ್ನು 25 ಮೂಲಾಂಕ (ಶೇ 0.25)ದಷ್ಟು ಕಡಿತಗೊಳಿಸಿ ಶೇ 3.75 ಕ್ಕೆ ಇಳಿಸಿದೆ. ಆದರೆ, ಲಾಕ್‌ಡೌನ್ ಪರಿಣಾಮದಿಂದ ಬಿಕ್ಕಟ್ಟಿನಲ್ಲಿರುವ ಆರ್ಥಿಕತೆಗೆ ಹೆಚ್ಚಿನ ಪರಿಹಾರವನ್ನು ಒದಗಿಸಲು ರೆಪೊ ದರ (ಬ್ಯಾಂಕ್‍ಗಳಿಗೆ ರಿಸರ್ವ್  ಬ್ಯಾಂಕ್‍  ನೀಡುವ ಸಾಲದ ಮೇಲಿನ ಬಡ್ಡಿದರ)ದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಅವಧಿಯನ್ನು ಮೇ 3 ರವರೆಗೆ ವಿಸ್ತರಿಸಿದ ನಂತರ ಮೊದಲ ಬಾರಿಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ‘ಹಣ ಪ್ರಸರಣ ಹೊಂದಾಣಿಕೆ ಸೌಲಭ್ಯ (ಎಲ್‌ಎಎಫ್) ಅಡಿ  ರಿವರ್ಸ್ ರೆಪೊ ದರವನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿ ಶೇ 3.75ಕ್ಕೆ ಇಳಿಸಲಾಗಿದೆ. ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇ 4.40ರಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ.’ ಎಂದು ಹೇಳಿದರು. ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಹಂತ ಹಂತವಾಗಿ ಪುನರ್‍ ಸ್ಥಾಪಿಸಲು ಬ್ಯಾಂಕ್‍ಗಳ ಎಲ್‌ಸಿಆರ್ (ಲಿಕ್ವಿಡಿಟಿ ಕವರೇಜ್ ಅನುಪಾತ) ಅಗತ್ಯತೆಯನ್ನು ಶೇ 100 ರಿಂದ ಶೇ 80 ಕ್ಕೆ ಇಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಕೋವಿಡ್ -19 ರಿಂದ ಎದುರಾಗಿರುವ ಹಣಕಾಸಿನ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕುಗಳು ಯಾವುದೇ ಹೆಚ್ಚಿನ ಲಾಭಾಂಶವನ್ನು ಪಾವತಿಸಬಾರದು ಎಂದು ಅವರು ಸೂಚಿಸಿದ್ದಾರೆ.ದೇಶದಲ್ಲಿ ಸ್ಥಗಿತಗೊಂಡ ಆರ್ಥಿಕತೆಯನ್ನು ಪುನರಾರಂಭಿಸಲು ಉದ್ದೇಶಿತ ಉತ್ತೇಜನಾ ಪ್ಯಾಕೇಜ್‌ನ ವಿವಿಧ ಆಯಾಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸಿದ ಒಂದು ದಿನದ ನಂತರ ರಿಸರ್ವ್  ಬ್ಯಾಂಕ್‍ , ರಿವರ್ಸ್ ರೆಪೊ ದರ ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.

ಸುದ್ದಿ ಓದಿ