ಅಥಣಿ

ನಿವೃತ್ತಿ: ರಾಮಣ್ಣ ಧರಿಗೌಡರಗೆ ಸನ್ಮಾನ

ನಿವೃತ್ತಿ: ರಾಮಣ್ಣ ಧರಿಗೌಡರಗೆ ಸನ್ಮಾನ

ಲೋಕದರ್ಶನ ವರದಿ 


ಅಥಣಿ 31: ಸರಕಾರಿ ನೌಕರರ ಸಂಘದ ಅಥಣಿ ತಾಲೂಕಾ ಅಧ್ಯಕ್ಷರಾಗಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರಾಮ ಧರಿಗೌಡ ನೌಕರರ ಹಿತ ಕಾಪಾಡುವಲ್ಲಿ ಶ್ರಮಿಸಿದ ಕಾರ್ಯ ಅನುಕರಣೀಯ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. 

           ಅವರು ಸ್ಥಳೀಯ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಸರಕಾರಿ ನೌಕರರ ತಾಲೂಕಾ ಅಧ್ಯಕ್ಷ ರಾಮ ಧರಿಗೌಡರ ನಿವೃತ್ತಿ ಅಂಗವಾಗಿ ಆಯೋಜಿಸಿದ್ದ ಸರಕಾರಿ ನೌಕರರ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಮ ಧರಿಗೌಡ ಸುಮಾರು 35 ವರ್ಷಗಳ ಕಾಲ ಅಥಣಿಯ ಅರಣ್ಯ ಇಲಾಖೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದರು. 

       ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾತನಾಡಿದ ಕೊಳಗೇರಿ ನಿಗಮದ ಅಧ್ಯಕ್ಷ, ಶಾಸಕ ಮಹೇಶ ಕುಮಠಳ್ಳಿ, ಒಬ್ಬ ಸರಕಾರಿ ನೌಕರನ ನಿವೃತ್ತಿಯ ಅಂಗವಾಗಿ ಸರಕಾರಿ ನೌಕರರ ಹಿತಕ್ಕಾಗಿ ವಿಚಾರ ಸಂಕಿರಣ ಆಯೋಜಿಸಿರುವುದು ಬಹುಶಃ ಇದೆ ಮೊದಲು ಎಂದೆನಿಸುತ್ತದೆ ಎಂದರು. 

            ಅಧ್ಯಕ್ಷತೆ ವಹಿಸಿ ಮಾತನಾಡಿದ ಸರಕಾರಿ ನೌಕರರ ಸಂಘದ ರಾಜ್ಯಘಟಕದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ರಾಜ್ಯದ 5 ಲಕ್ಷಕ್ಕೂ ಅಧಿಕ ರಾಜ್ಯ ಸರಕಾರಿ ನೌಕರರ ಹಿತ ಕಾಪಾಡುವಲ್ಲಿ ಸರಕಾರಿ ನೌಕರರ ಸಂಘ ಕಾರ್ಯ ಮಾಡುತ್ತಿದೆ. ಅಥಣಿಯ ರಾಮಣ್ಣ ಧರಿಗೌಡರು ಕಳೆದ  15 ವರ್ಷಗಳಿಂದ ನೌಕರರ ಸಂಘದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ ಕಳೆದ 7 ವರ್ಷಗಳಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು. 

         ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ರಾಮ ಧರಿಗೌಡರ ಮಾತನಾಡಿ ತಮ್ಮೊಂದಿಗೆ ಕಾರ್ಯಗಳಲ್ಲಿ ಹಾಗೂ ಚಟುವಟಿಕೆಗಳಲ್ಲಿ ಸಹಕರಿಸಿದ ಸರಕಾರಿ ನೌಕರರಿಗೆ ಹಾಗೂ  ಕುಟುಂಬದ ಸದಸ್ಯರನ್ನು ಅಭಿನಂದಿಸಿದರು. 

           ಪಂಚಾಯತ ರಾಜ್ ಇಲಾಖೆಯ ವೀರಣ್ಣ ವಾಲಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಗಚ್ಚಿನಮಠದ ಮುರುಘೇಂದ್ರ ಸ್ವಾಮೀಜಿ, ಶೇಗುಣಸಿ ವಿರಕ್ತ ಮಠದ  ಡಾ.ಮಹಾಂತಪ್ರಭು ಸ್ವಾಮೀಜಿ ಉಪಸ್ಥಿತರಿದ್ದು ಮಾತನಾಡಿದರು. 

               ಸಣ್ಣ ನೀರಾವರಿ ಇಲಾಖೆಯ ಶ್ರೀಕಾಂತ ಮಾಕಾಣಿ, ತಾಲೂಕಾ ಪಂಚಾಯತನ ಉದಯಗೌಡ ಪಾಟೀಲ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ತಹಶಿಲ್ದಾರ ಸುರೇಶ ಮುಂಜೆ, ಲೋಕೋಪಯೋಗಿ ಇಲಾಖೆಯ ಜಯಾನಂದ ಹಿರೇಮಠ,  ತಾಲೂಕಾ ಪಂಚಾಯತನ ಶೇಖರ ಕರಬಸಪ್ಪಗೋಳ ಸೇರಿದಂತೆ ಎಲ್ಲ ಸರಕಾರಿ ನೌಕರರು ಉಪಸ್ಥಿತರಿದ್ದರು. 


ಸುದ್ದಿ ಓದಿ