ಜಮಖಂಡಿ

ನಿವೃತ್ತಿ: ನೆಚ್ಚಿನ ಗುರುವಿಗೆ ವಿದ್ಯಾರ್ಥಿನಿಯರಿಂದ ಕಲ್ಪವೃಕ್ಷ ಸಸಿ ಕಾಣಿಕೆ

ನಿವೃತ್ತಿ: ನೆಚ್ಚಿನ ಗುರುವಿಗೆ ವಿದ್ಯಾರ್ಥಿನಿಯರಿಂದ ಕಲ್ಪವೃಕ್ಷ ಸಸಿ ಕಾಣಿಕೆ

ಚಿಕ್ಕಪಡಸಲಗಿ (ಜಮಖಂಡಿ) 11: ತಮ್ಮ ಅಚ್ಚುಮೆಚ್ಚಿನ ಗುರುವೊಬ್ಬರು ಸೇವಾ ನಿವೃತ್ತಿ ಹೊಂದಿದ ನಿಮಿತ್ಯ ಹಲವಾರು ಹಿತೈಷಿಗಳು, ಶಾಲಾ ಮಕ್ಕಳು ಸಂಪ್ರೀತಿಯ ಕಾಣಿಕೆಗಳನ್ನು ಸಮರ​‍್ಿಸಿ ಧನ್ಯತಾಭಾವ ಮೆರೆದರು. ಆದರೆ ಕೆಲ ಬಾಲೆಯರು ತಮ್ಮ ಪ್ರೀತಿ ಪಾತ್ರ ಆ ಗುರುವಿಗೆ ವಿಭಿನ್ನ ಸವಿನೆನಪಿನ ಕಾಣಿಕೆಯೊಂದನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಗಮನ ಸೆಳೆದರು.  

ನಿಷ್ಕಲ್ಮಶ ಭಾವದ ಆ ಗುರುಜಿಗೆ ಶಾಲಾ ಬಾಲೆಯರು ಪರಿಸರ ಕಾಳಜಿಯುತ ಕಳಕಳಿಯ ಕಾಣಿಕೆ. ಗುರುಜಿಯವರ ವಿಶ್ರಾಂತ ಜೀವನವು ಕಲ್ಪವೃಕ್ಷದಂತೆ ಅರಳಲಿ. ಸವಿಸಿಹಿ ಭಾವ ಬಂಧನ ಗಟ್ಟಿಗೊಳ್ಳಲಿ. ಓದಾರ್ಯ ಗುಣದ ಪ್ರೀತಿಭರಿತ ಪುಷ್ಪರಸ ಇನ್ನೂ ಶಿಷ್ಯವೃಂದಕ್ಕೆ ಲಭಿಸಲಿ ಎನ್ನುವ ಉದಾತ್ತ ಚಿಂತನೆ ಸಿಂಚನದೊಂದಿಗೆ ಸವಿನೆನಪಿಗಾಗಿ ಕಲ್ಪವೃಕ್ಷದ ಸಸಿ ನೀಡಿ ಮಹೋನ್ನತ ಪರಿಸರ ಸ್ನೇಹಕ್ಕೆ ಮುಂದಾದರು. ತಮ್ಮ ಅಂತರಂಗದಲ್ಲಿ ಮೊಳಕೆಯೊಡೆದಿದ್ದ ಹಸಿರಿನ ಹಸಿವು ಗುರುವಿಗೆ ಕಲ್ಪವೃಕ್ಷ ಸಸಿ ನೀಡುವ ಮೂಲಕ ನೀಗಿಸಿಕೊಂಡು ಹಸಿರೆಲೆಯ ಚಿಗುರಕ್ಕೆ ನಾಂದಿಯಾಗಿ ಮಾದರಿಯಾದರು.  

ಇದು ಕೃಷ್ಣೆಯ ಸೆರೆಗಿನಲ್ಲಿರುವ ಪುಟ್ಟ ಗ್ರಾಮ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿರುವ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಬಸವರಾಜ ಅನಂತಪುರ ಅವರು ಸುದೀರ್ಘ 39 ವರ್ಷಗಳ ಕಾಲ ಅತ್ಯಂತ ಶಿಸ್ತು ಬದ್ಧ ವೃತ್ತಿ ಕಾಯಕ ಗೈದಿದ್ದಾರೆ. ಸೇವಾ ಪಯಣದಲ್ಲಿ ಎಲ್ಲರ ಪ್ರೀತಿ, ವಿಶ್ವಾಸ ಪಡೆದು ಮೆಚ್ಚುಗೆ ಸಂಪಾದಿಸಿ ಈಚೆಗೆ ಸೇವಾ ವಯೋನಿವೃತ್ತಿ ಹೊಂದಿದ್ದ ಪ್ರಯುಕ್ತ ಶಾಲಾ ಬಾಲೆಯರು ಕಲ್ಪವೃಕ್ಷದ ಸಸಿಯನ್ನು ಗುರುವಿಗೆ ಕಾಣಿಕೆಯಾಗಿ ನೀಡಿ ಗುರುವಿನ ಅಮೃತಹಸ್ತದಿಂದಲೇ ಅವರ ಸವಿನೆನಪಿಗಾಗಿ ಶಾಲಾವರಣದಲ್ಲಿ ನೆಡಿಸಿ ಧನ್ಯತಾಭಾವ ತೋರಿದ್ದಾರೆ. ಕಲ್ಪವೃಕ್ಷ ಸಸಿ ಅನಂತಪುರ ಗುರುಜಿ ಸಂತಸದಿಂದ ನೆಟ್ಟು, ನೀರುಣಿಸಿ ಮಕ್ಕಳೊಂದಿಗೆ ಖುಷಿ ಹಂಚಿಕೊಂಡರು.  

ಶಾಲಾ ಬಾಲೆಯರಾದ ಸ್ವಾತಿ ಯಲಗುದ್ರಿ, ಪ್ರಿಯಾಂಕಾ ಜಾಯಗೊಂಡ, ಪ್ರತೀಕ್ಷಾ ಜಾಯಗೊಂಡ, ಕವಿತಾ ಲಾಯ್ಯನವರ,ಕಾವೇರಿ ಹಾದಿಮನಿ, ಸಾಕ್ಷಿ ಜಾಧವ ಸೇರಿದಂತೆ ಅನೇಕ ಒಡನಾಡಿ ಸ್ನೇಹಪಾಠಿಗಳು ಟೆಂಗಿನ ಸಸಿ ಗುರುವಿಗೆ ನೀಡಿ ಗೌರವಿಸಿದರು. 

ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ಮಕ್ಕಳುಗೈದ ಈ ವಿಶೇಷ ಅಪರೂಪದ ಕಾಯಕ ಶ್ಲಾಘನೀಯ.ಯುವಜನತೆಯಲ್ಲಿ ಪರಿಸರ ಪ್ರೇಮ ವ್ಯಾಪಕವಾಗಿ ಜಾಗೃತವಾಗಬೇಕು. ಗಿಡ,ಮರಗಳನ್ನು ನೆಟ್ಟು ಸಂರಕ್ಷಿಸಲು ಮುಂದಾದರೆ ಅವು ನಮ್ಮನ್ನು ರಕ್ಷಣೆ ಮಾಡುತ್ತವೆ. ಶುದ್ಧ ಗಾಳಿ ನೀಡುವ ಮೂಲಕ ಜೀವ ಚೈತನ್ಯ ಕರುಣಿಸುತ್ತವೆ. ಕಾರಣ ಪ್ರತಿಯೊಬ್ಬರಲ್ಲೂ ಇಂದು ಪರಿಸರ ವ್ಯವಸ್ಥೆಯ ಕಾಳಜಿ ಇರಬೇಕಾಗಿರುವುದು ಅತ್ಯಗತ್ಯ ಎಂದರು.       

ಶಿಕ್ಷಕರಾದ ಈರಣ್ಣ ದೇಸಾಯಿ, ಸದಾಶಿವ ಸಿದ್ದಾಪುರ, ಲೋಹಿತ ಮಿರ್ಜಿ, ಜಿ.ಆರ್‌.ಜಾಧವ, ಶಿಕ್ಷಕಿಯರಾದ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಮೀಳಾ ತೇಲಸಂಗ, ಪ್ರಾಥಮಿಕ ಶಾಲೆಯ ಹಣಮಂತ ಗದಿಗೆಪ್ಪಗೋಳ, ದೈಹಿಕ ಶಿಕ್ಷಕ ಕುಮಾರ ವಾಣಿ ಮೊದಲಾದವರಿದ್ದರು. 


ಸುದ್ದಿ ಓದಿ