ಪಪೂ ಶಿಕ್ಷಣ ಇಲಾಖೆ ಜಿಪಂ ವ್ಯಾಪ್ತಿಗೆ ಸೇರಿಸುವ ಸರ್ಕಾರದ ಸುತ್ತೋಲೆಯನ್ನು ಹಿಂಪಡೆಯಲು ಮನವಿ
ಚಿಕ್ಕೋಡಿ 23: ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಧಿಕಾರಿಗಳ ಮೇಲುಸ್ತುವಾರಿಗೆ ವಹಿಸಿರುವ ಸರ್ಕಾರದ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರ, ಉಪನ್ಯಾಸಕರ ಹಾಗೂ ಬೋಧಕೇತರ ನೌಕರರ ಸಂಘಟನೆಗಳ ಒಕ್ಕೂಟ ಗುರುವಾರ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಚಿಕ್ಕೋಡಿ ನಗರದ ಬಸವ ವೃತ್ತದಲ್ಲಿ ಸೇರಿದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲ ಉಪನ್ಯಾಸಕರು ಕಪ್ಪು ಬಟ್ಟೆ ಕಟ್ಟಿಕೊಂಡು ಮಿನಿವಿಧಾನಸೌಧವರೆಗೆ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಎಂದು ಹೆಸರು ಬದಲಿಸಲಾಗಿದೆ. ಕಾಪಿ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಪಿ.ಯು ಹಂತವನ್ನು ಪ್ರೌಢಶಾಲೆಗಳಲ್ಲಿ ವೀಲೀನಗೊಳಿಸುವ ಪ್ರಕ್ರಿಯೆ ಹಿಂದಿನಿಂದಲೂ ನಡೆಯುತ್ತಿದೆ ಇದನ್ನು ಕೂಡಲೇ ಕೈಬಿಟ್ಟು ಪದವಿ ಪೂರ್ವ ಶಿಕ್ಷಣ ಇಲಾಖೆ ಎಂಬ ಹೆಸರನ್ನೇ ಹಿಂದಿನಂತೆ ಯತಾಸ್ಥಿತಿಯಲ್ಲಿ ಇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಜಿಲ್ಲಾ ಹಂತಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೇಲುಸ್ತುವಾರಿ ನಡೆಸುವ ಸಂಬಂಧ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮತ್ತು ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಇವರಿಗೆ ವಹಿಸಲು ಸರ್ಕಾರದ ಅಧೀನ ಕಾರ್ಯದರ್ಶಿಗಳು ದಿ. 18.10.2023 ರಂದು ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸರ್ಕಾರವು ಯಾವುದೇ ಶಿಕ್ಷಕ/ಶಿಕ್ಷಕೇತರ ಸಂಘಟನೆಗಳ ಜೊತೆಗಾಗಲಿ, ಶಿಕ್ಷಣ ತಜ್ಞರ ಜೊತೆಗಾಗಲಿ ಸಾಧಕ- ಬಾಧಕಗಳನ್ನು ಕುರಿತು ಚರ್ಚೆ, ಸಮಾಲೋಚನೆಗಳನ್ನು ನಡೆಸದೆ ಏಕಾಏಕಿ ಪಿಯು ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿರುವುದು ಸಂಪೂರ್ಣ ಅವೈಜ್ಞಾನಿಕ ಮತ್ತು ಅತಾರ್ಕಿಕ ನಿರ್ಧಾರವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಕುಸಿಯುವುದು ಮಾತ್ರವಲ್ಲ; ಒದಿನ ಬಗೆಗೆ ತಾತ್ಸಾರವನ್ನು ಬೆಳೆಸುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಈ ಪದ್ಧತಿಯಿಂದ ನೈಜ ಮೌಲ್ಯಮಾಪನ ಸಾಧ್ಯವಾಗುವುದಿಲ್ಲ. ಈ ವಿಧಾನದಿಂದ ಪ್ರಮಾಣಾತ್ಮಕ ಫಲಿತಾಂಶ ದೊರಕುತ್ತದೆಯೇ ವಿನಃ ಗುಣಾತ್ಮಕ ಫಲಿತಾಂಶವಲ್ಲ ! ಜೊತೆಗೆ ಉಪನ್ಯಾಸಕರು ಶೈಕ್ಷಣಿಕ ವರ್ಷಾರಂಭದ ಕೆಲವು ತಿಂಗಳು ನೂತನ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವುದನ್ನು ಬಿಟ್ಟು. ಹಳೆಯ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳಲ್ಲಿ ತೊಡಗಬೇಕಾಗುತ್ತದೆ. ಇಷ್ಟೇ ಅಲ್ಲದೆ, ಸಂಪೂರ್ಣ ಬೇಸಿಗೆ ರಜೆಯನ್ನು ಉಪನ್ಯಾಸಕರು ಕಳೆದುಕೊಳ್ಳುಬೇಕಾಗುತ್ತದೆ. ಆದ್ದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ರಜೆ ರಹಿತ ಇಲಾಖೆಯನ್ನಾಗಿ ಘೋಷಿಸಿ, ಇತರ ಸವಲತ್ತುಗಳನ್ನು ನೀಡಬೇಕೆಂದು ಉಪನ್ಯಾಸಕರು ಆಗ್ರಹಿಸಿದರು.
ಈ ಎಲ್ಲ ವಿಷಯಗಳಲ್ಲಿ ಸರ್ಕಾರ ಸಕಾಲದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದೇ ಹೋದಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಮತ್ತು ಬೋಧಕೇತರ ಸಂಘಗಳ ಒಕ್ಕೂಟವು ಮುಂಬರುವ ಡಿಸೆಂಬರ್ 1ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದೆ ಎಂದು ಉಪನ್ಯಾಸಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪಪೂ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಧುಸೂದನ ಬೀಳಗಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಅಪ್ಪು ಗುರಕನವರ, ಬೋಧಕರ ನೌಕರ ಸಂಘದ ಅಧ್ಯಕ್ಷ ಮಹಾದೇವ ತಳವಾರ, ದೀಪಕ ಪಾಟೀಲ, ಆನಂಧ ಕೋಳಿ, ಮಹಾಂತೇಶ ಬಿರಾದಾರ, ಉತ್ತಮ ಶಿಂಧೆ, ವಿಠ್ಠಲ ಬಡಾಯಿ, ಸಚೀನ ಕಮತರ, ಎಸ್.ಜಿ.ಕೋಲಕಾರ ಮುಂತಾದವರು ಇದ್ದರು.