ಸರ್ಕಾರಿ ಕನ್ನಡ ಪ್ರೌಢಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಒತ್ತಾಯಿಸಿ ಮನವಿ
ಲೋಕದರ್ಶನ ವರದಿ
ಶಿಗ್ಗಾವಿ 21: ಪಟ್ಟಣದ ಸರ್ಕಾರಿ ಕನ್ನಡ ಪ್ರೌಢಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಒತ್ತಾಯಿಸಿ ಎಸ್ಎಫ್ಐ ತಾಲೂಕ ಸಮಿತಿಯಂದ ಮುಖ್ಯೋಪಾಧ್ಯಾಯರಾದ ಕೆ. ಎಸ್ ಚಕ್ರಸಾಲಿಯವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ಸರ್ಕಾರಿ ಕನ್ನಡ ಪ್ರೌಢಶಾಲೆ ಆರಂಭವಾಗಿ ಹದಿನಾರು ವರ್ಷಗಳಾದರೂ ಇನ್ನೂ ಸರಿಯಾದ ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ದಿನನಿತ್ಯ ಪರದಾಡುವ ಪರಿಸ್ಥಿತಿ ಇದೆ. ಸರಕಾರಿ ಕನ್ನಡ ಪ್ರೌಢ ಶಾಲೆಯಲ್ಲಿ 199 ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯನ್ನು ನಿವಾರಿಸಿ ಮತ್ತು ಶಾಲೆಗೆ ಸ್ವಂತ ನಿವೇಶನ ಹಾಗೂ ಕಡಿಮೆ ಅಂದರೂ 10 ಎಕರೆ ಜಾಗವನ್ನು ನೀಡಬೇಕು.
ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಪರೀಕ್ಷಾ ಪಲಿತಾಂಶ ಖಾಸಗಿ ಶಾಲೆಗಳಿಗೆ ಸೆಡ್ಡುಹೊಡೆಯುವ ಹಾಗೆ ಇದೆ. ಮತ್ತು ಕ್ರೀಡೆಯಲ್ಲಿ ವಿದ್ಯಾರ್ಥಿಗಳು ರಾಜ್ಯ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಅಲ್ಲದೆ ಅಂತರ ರಾಷ್ಟ್ರೀಯ ಮಟ್ಟದಲ್ಲಿಯ ಸಾಧನೆಯನ್ನು ಮಾಡಿದ್ದಾರೆ. ಆ ವಿದ್ಯಾರ್ಥಿಗಳಿಗೆ ಆಟದ ಮೈದಾನ ಹಾಗೂ ಆಟದ ಸಲಕರಣೆಗಳನ್ನು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಎಫ್ಐ ತಾಲೂಕ ಅಧ್ಯಕ್ಷ ರವಿ ಬಂಕಾಪುರ, ಕಾರ್ಯದರ್ಶಿ ಅರ್ಜುನ ರಜಪೂತ ಹಾಗೂ ಉಪಾಧ್ಯಕ್ಷ ದೇವರಾಜ ಅಕ್ಕಸಾಲಿ, ಮುಖಂಡರುಗಳಾದ ಲಕ್ಷ್ಮಿ ಡಿ, ಪೂರ್ಣಿಮಾ ಡವಗಿ, ದುರಗಪ್ಪ ಯೆಮ್ಮೀನವರ, ಅಣ್ಣಪ್ಪ ಕೊರವರ, ಅಭಿಷೇಕ ಕ್ಯಾಲಕೊಂಡ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.