ಯುಟಿಪಿ ಕಾಲುವೆಗೆ ನೀರು ಹರಿಸಲು ಒತ್ತಾಯಿಸಿ ಮನವಿ
ರಾಣೇಬೆನ್ನೂರ 01: ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಕೂಡಲೇ ಯುಟಿಪಿ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತರು ಬುಧವಾರ ನಗರದ ಯುಟಿಪಿ ಕಾರ್ಯನಿರ್ವಾಹಕ ಎಂಜಿನಿಯರ್ ಮೂಲಕ ಶಿವಮೊಗ್ಗದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಈ ಬಾರಿ ಮುಂಗಾರು ಹಂಗಾಮಿನ ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ತಾಲೂಕಿನ ರೈತರು ಉತ್ಸಾಹದಿಂದ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಮಳೆ ಕೈಕೊಟ್ಟಿರುವುದರಿಂದ ಬೀಜಗಳು ಮೊಳಕೆಯೊಡೆಯುವ ಹಂತದಲ್ಲಿ ಹಾಳಾಗುತ್ತಿರುವುದು ರೈತರನ್ನು ಚಿಂತೆಗಿಡು ಮಾಡಿದೆ. ಇಂತಹ ಸಮಯದಲ್ಲಿ ಯುಟಿಪಿ ಕಾಲುವೆಗೆ ನೀರು ಹರಿಸಿದಲ್ಲಿ ಸಾಲಸೋಲ ಮಾಡಿ ಬಿತ್ತನೆ ಮಾಡಿರುವ ರೈತರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಇದರ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಇಲ್ಲವಾದರೆ ಜು.5ರಂದು ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಸವರಾಜ ಕೊಂಗಿ, ಹರಿಹರಗೌಡ ಪಾಟೀಲ, ನಾಗರಾಜ ಯಲ್ಲಕ್ಕನವರ, ಜಮಾಲಸಾಬ ಶೇತಸನದಿ, ಶಿವಾನಂದ ಬುಳ್ಳಮ್ಮನವರ, ಗೋವಿಂದರೆಡ್ಡಿ ಚಳಗೇರಿ, ಹನುಮಂತಪ್ಪ ದಾಸಣ್ಣನವರ ಮತ್ತಿತರರಿದ್ದರು.