ಜನೆವರಿ 10ರೊಳಗೆ ನಿವೇಶನ ಹಂಚಿಕೆ ಮಾಡಲು ಮನವಿ
ಬ್ಯಾಡಗಿ: ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ವಾಸಿಸುವ ನಿವೇಶನ ರಹಿತ ಬಡ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರೂ ಕೂಡ ನಿವೇಶನವನ್ನು ಹಂಚಿಕೆ ಮಾಡಲು ಪುರಸಭೆಯು ಅನುಸರಿಸುತ್ತಿರುವ ವಿಳಂಬ ಧೋರಣೆಯನ್ನು ಖಂಡಿಸಿರುವ ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಘಟಕದ ರಾಜ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಜನೇವರಿ 10ರೊಳಗಾಗಿ ನಿವೇಶನ ಹಂಚಿಕೆ ಮಾಡದೇ ಹೋದರೆ ಫಲಾನುಭವಿಗಳ ಜೊತೆಗೂಡಿ ಪುರಸಭಾ ಕಾರ್ಯಾಲಯದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.ಈ ಕುರಿತು ತಹಶೀಲ್ದಾರ ರವಿಕುಮಾರ ಕೊರವರ ಹಾಗೂ ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿರುವ ಅವರು, ಫಲಾನುಭವಿಗಳಿಗೆ ನಿವೇಶನ ಹಂಚಿಕೆಗಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಮಲ್ಲೂರು ರಸ್ತೆಯಲ್ಲಿ ನಿಯಮಾನುಸಾರ ಹತ್ತು ಎಕರೆ ಜಮೀನು ಖರೀದಿಸಿದ್ದರೂ ಸಹ ನಿವೇಶನಗಳನ್ನು ಹಂಚಿಕೆ ಮಾಡದೇ ನಾಲ್ಕು ವರ್ಷಗಳನ್ನು ಕಳೆಯಲಾಗಿದೆ. ಈ ಬಗ್ಗೆ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ವಸತಿ ಸಚಿವರಿಗೆ, ರಾಜೀವಗಾಂಧಿ ವಸತಿ ಯೋಜನೆಯ ನಿಗಮದ ಅಧಿಕಾರಿಗಳಿಂದ ಹಿಡಿದು ಡಿಸಿ, ಎಸಿ ಗಳವರೆಗೂ ಮನವಿ ಸಲ್ಲಿಸಿ ಗಮನ ಸೆಳೆದಿದ್ದರೂ ಸಹ ಕ್ರಮ ಕೈಗೊಳ್ಳಲು ವಿಳಂಬ ಧೋರಣೆ ಹಾಗೂ ನಿರ್ಲಕ್ಷ್ಯತನ ಹೆಚ್ಚಾಗಿದೆ ಎಂದು ಆರೋಪಿಸಿದರು.
ಜನೇವರಿ 10ರಂದು ಧರಣಿ ಸತ್ಯಾಗ್ರಹ...!!
ಪಟ್ಟಣದ ನಿವೇಶನ ರಹಿತ ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಶಾಸಕರು ಮತ್ತು ಪುರಸಭೆಯ ಆಡಳಿತ ಮಂಡಳಿ ತುರ್ತುಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೆ ಪುರಸಭೆಯ ಎದುರು ಜನೇವರಿ 10ರಂದು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸುವುದು ಅನಿವಾರ್ಯವೆಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಸದಸ್ಯೆ ಫಕ್ಕೀರಮ್ಮ ಚಲುವಾದಿ, ನ್ಯಾಸ ಘಟಕದ ಜಿಲ್ಲಾ ಸಂಚಾಲಕಿ ಫರೀದಾಭಾನು ನದ್ದಿಮುಲ್ಲಾ, ಮಾದೇವಕ್ಕ ಕಾರಿ, ಬಸವರಾಜ ಸೇರಿದಂತೆ ನಿವೇಶನ ರಹಿತ ಫಲಾನುಭವಿಗಳು ಉಪಸ್ಥಿತರಿದ್ದರು.