ನೂತನ ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ಮನವಿ
ರಾಣೇಬೆನ್ನೂರ 01: ನೂತನ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಕಡೆಗಣಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರ ಶಂಕರ್ಜಿ.ಎಸ್. ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕೇಂದ್ರ ಸರಕಾರ ಕೃಷಿಗೆ ಪೂರಕವಾದ ಕಾನೂನುಗಳನ್ನು ರೂಪಿಸುವ ಬದಲು ಮಾರಕವಾಗಿರುವ ಅಂಶಗಳನ್ನು ಒಳಗೊಂಡ ಕಾನೂನು ರಚನೆ ಮಾಡಿದೆ. ಕಳೆದ ಏಳು ತಿಂಗಳುಗಳಿಂದ ದೆಹಲಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರಕಾರ ಅದಕ್ಕೆ ಸ್ಪಂದಿಸದಿರುವುದು ಖೇದಕರ ಸಂಗತಿಯಾಗಿದೆ. ಕೋವಿಡ್ನಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ ರೈತರು ಮಾತ್ರ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿ ದೇಶಕ್ಕೆ ಅನ್ನ ನೀಡುವ ಕೆಲಸ ಮಾಡಿದ್ದಾರೆ. ಆದರೆ ರೈತನ ಪರಿಸ್ಥಿತಿ ಮಾತ್ರ ಅಯೋಮಯವಾಗಿದ್ದು ಸಾಲದ ಸಂಕೋಲೆಗೆ ಸಿಲುಕಿದ್ದಾನೆ. ಯುಪಿಎ ಸರಕಾರದ ಅವಧಿಯಲ್ಲಿ ಬೆಲೆ ಕುಸಿತವಾದಾಗ ತಕ್ಷಣ ಮಧ್ಯ ಪ್ರವೇಶಿಸಿ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರ ನೆರವಿಗೆ ಧಾವಿಸುತ್ತಿತ್ತು. ಆದರೆ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಹಠಮಾರಿ ಧೋರಣೆ ಅನುಸರಿಸುತ್ತಾ ರೈತರ ಕತ್ತು ಕೊಯ್ಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ತಾಲೂಕು ಅಧ್ಯಕ್ಷ ಕರಬಸಪ್ಪ ಅಗಸಿಬಾಗಿಲ, ಸುರೇಶ ಧುಳೆಹೊಳಿ, ಚನ್ನಪ್ಪ ಹೊನ್ನಚಿಕ್ಕಪ್ಪನವರ, ಲೋಕೇಶ ಸುತಾರ, ನಾಗಪ್ಪ ಯಲಿಗಾರ, ಬಸವರಾಜ ಕಡೂರ, ಶಿದ್ದಪ್ಪ ಕುಪ್ಪೇಲೂರ, ಸುರೇಶ ಮೇದೂರ ಸೇರಿದಂತೆ ಮತ್ತಿತರರಿದ್ದರು.