ಕಡಲೆ ಕಾಳು ಖರೀದಿ ಕೇಂದ್ರ ಶೀಘ್ರ ಆರಂಭಿಸಲು ಮನವಿ
ಬೈಲಹೊಂಗಲ 2: ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕಡಲೆ ಕಾಳು ಬೆಳೆದಿರುವ ಪ್ರದೇಶವಾಗಿರುವ ದೊಡವಾಡ ಹಾಗೂ ಸುತ್ತಲಿನ ಗ್ರಾಮಗಳ ರೈತರಿಗೆ ಅನುಕೂಲವಾಗಲು ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಖರೀದಿ ಕೇಂದ್ರ ತೆರೆಯಲು ಅವಕಾಶ ನೀಡಬೇಕೆಂದು ತಾಲೂಕಿನ ದೊಡವಾಡ ಗ್ರಾಮದ ಸಂಗಮೇಶ್ವರ ಪಿಕೆಪಿಎಸ್ ಆಡಳಿತ ಮಂಡಳಿ ಸದಸ್ಯರು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕಡಲೆ ಕಾಳು ಬೆಳೆಗೆ ಯೋಗ್ಯ ಬೆಲೆ ಬೆಲೆ ಸಿಗದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಸರಕಾರ ರೈತರ ನೆರವಿಗೆ ಧಾವಿಸಿ ಪ್ರತಿ ರೈತಿರಿಂದ 20 ಕ್ವಿಂಟಲ್ ಕಡಲೆ ಕಾಳು ಖರೀದಿಸುವ ಆದೇಶ ಹೊರಡಿಸಬೇಕು. ಈಗಾಗಲೇ ಸುಸಜ್ಜಿತ ಖರೀದಿ ಕೇಂದ್ರ ವ್ಯವಸ್ಥೆ ಹೊಂದಿರುವ ಸಂಗಮೇಶ್ವರ ಪಿಕೆಪಿಎಸ್‍ನಲ್ಲಿ ಶೀಘ್ರ ಕಡಲೆ ಕಾಳು ಖರೀದಿ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡಲು ಅವಕಾಶ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ವೇಳೆ ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ಉಪಾಧ್ಯಕ್ಷ ವೀರೇಂದ್ರ ಸಂಗೊಳ್ಳಿ, ನಿರ್ದೇಶಕರಾದ ಬಸವರಾಜ ಮುರಗೋಡ, ಮಡಿವಾಳಪ್ಪ ವಿಭೂತಿ, ಈಶ್ವರ ಅಂದಾನಶೆಟ್ಟಿ, ಲಕ್ಕಪ್ಪ ಅಲಕ್ಕನವರ, ಶೋಭಾ ಕಂಚಿನಮಠ, ಶಂಕ್ರವ್ವ ಚೌಡಣ್ಣವರ, ಮಹಾದೇವಪ್ಪ ಸಂಗೊಳ್ಳಿ ಉಪಸ್ಥಿತರಿದ್ದರು.