ಮಾನವನ ಬದುಕು ಶಾಂತವಾಗಿರಲು ಧರ್ಮಾಚರಣೆ ಅಗತ್ಯ: ಹೊನ್ನಾಳಿ ಶ್ರೀಗಳು
ರಾಣೇಬೆನ್ನೂರು 23: ಮಾನವ ಬದುಕು ಸದಾ ಶಾಂತಿ, ನೆಮ್ಮದಿ ಮತ್ತು ಸಂತೋಷದಿಂದ ಕೂಡಿರಬೇಕಾದರೆ ಪ್ರತಿಯೊಬ್ಬರೂ ಧರ್ಮದ ಅನುಯಾಯಿಗಳಾಗಿ ಆಚರಣೆ ಮೂಲಕ ಸಾಗಬೇಕು. ಇದರಿಂದ ಆರೋಗ್ಯ ವೃದ್ಧಿಯ ಜೊತೆಗೆ ಧರ್ಮ ಜಾಗೃತಿ ಮತ್ತು ಕುಟುಂಬದ ಅಭಿವೃದ್ಧಿಯೂ ಸಹ ಕಾಣಲು ಸಾಧ್ಯವಾಗಲಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.
ಅವರು ಮಂಗಳವಾರ ವಾಗೀಶ ನಗರದ ವೀರಭದ್ರ ಸ್ವಾಮಿಯ ಶರಭಿ ಗುಗ್ಗಳ ಮಹೋತ್ಸವ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಬ್ಬರೂ ದೇವರು ಧರ್ಮ ಮತ್ತು ಆಧ್ಯಾತ್ಮ ತಮ್ಮ ನಿತ್ಯದ ಬದುಕಿನಲ್ಲಿ ಅಚಾನೋಚವಾಗಿ ಅಳವಡಿಸಿಕೊಂಡು ಬಂದಿದ್ದರಿಂದಲೇ ಸದಾ ಕಾಲ ಸಂತೃಪ್ತಿಯ ಜೀವನವನ್ನು ಕಾಣುತ್ತಿದ್ದೇವೆ. ಧರ್ಮದ ಆಚರಣೆ ವಿಮುಖರಾದರೆ ಮಾನಸಿಕ ಶಾಂತಿಯೂ ಇಲ್ಲ. ಹಾಗೆಯೇ ನೆಮ್ಮದಿಯೂ ಇರುವುದಿಲ್ಲ. ಎನ್ನುವ ವಾಸ್ತವಿಕ ಸ್ಥಿತಿಯನ್ನು ಅರಿತಾಗ ಮಾತ್ರ ಸದಾ ಧರ್ಮದ ಅನುಯಾಯಿಗಳಾಗಿ ಸಂಸ್ಕೃತಿ ಸಂಸ್ಕಾರ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಲು ಸಾಧ್ಯವಾಗುವುದು ಎಂದ ಶ್ರೀಗಳು ಶರಭಿ ಗುಗ್ಗಳ ಮಹೋತ್ಸವಕ್ಕೆ ಬಹು ದೊಡ್ಡ ಪರಂಪರೆ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಸದಸ್ಯರಾದ ಪ್ರಭಾವತಿ ತಿಳವಳ್ಳಿ, ಮಂಜುನಾಥ ಅಂಗಡಿ, ವಿರೇಶ ಮೋಟಗಿ, ಜಿ.ಜಿ.ಹೊಟ್ಟಿಗೌಡ್ರ, ಬಾಬಣ್ಣ ಐರಣಿಶೆಟ್ಟರ್, ಬಿ.ಎಸ್.ಪಟ್ಟಣಶೆಟ್ಟಿ, ಎಸ್.ಎಸ್.ರಾಮಲಿಂಗಣ್ಣನವರ, ಶರಣಪ್ಪ ಮುಚಡಿ, ಚಂದ್ರ್ಪ ಮುಚಡಿ, ಕೊಟ್ರೇಶಪ್ಪ ಎಮ್ಮಿ, ಕರಬಸಪ್ಪ ರಾಮಲಿಂಗಣ್ಣನವರ, ಉಮೇಶ ಪಟ್ಟಣಶೆಟ್ಟಿ, ವಿನೋಧ ಜಂಬಗಿ, ಕಸ್ತೂರಿ ಪಾಟೀಲ, ಪ್ರಕಾಶ ಗುಪ್ತಾ ಸೇರಿದಂತೆ ಮತ್ತಿತರ ಗಣ್ಯರು, ವರ್ತಕರು, ಭಕ್ತರು ಪಾಲ್ಗೊಂಡಿದ್ದರು.
ಸಮಾರಂಭಕ್ಕೂ ಮುನ್ನ ನಡೆದ ಗುಗ್ಗಳ ಉತ್ಸವ ಮೆರವಣಿಗೆಯೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಭಾ ವೇದಿಕೆಗೆ ಸಾಂಗತ್ಯ ಗೊಂಡಿತು. ಮೆರವಣಿಗೆಗೆ ಅಟವಾಳಗಿ ಮನೆತನದ ವೀರಗಾಸೆ ಸಮಾಳ ವಾಧ್ಯಗಳು ವಿಶೇಷ ಮೆರಗು ನೀಡಿದ್ದವು.