ಬೆಳಗಾವಿ

ನವರಾತ್ರಿ ನಾಡಹಬ್ಬದ 6ನೇ ದಿನದ ಧಾರ್ಮಿಕ ಹಾಗೂ ಚಿಂತನ ಕಾರ್ಯಕ್ರಮ ಯಶಸ್ವಿ

ನವರಾತ್ರಿ ನಾಡಹಬ್ಬದ 6ನೇ ದಿನದ ಧಾರ್ಮಿಕ ಹಾಗೂ ಚಿಂತನ ಕಾರ್ಯಕ್ರಮ ಯಶಸ್ವಿ


ಸವದತ್ತಿ 17 : ನಗರದ ಗಾಂಧಿ ಚೌಕದಲ್ಲಿ ಕಾನೂನು ವೇದಿಕೆಯ ಆಶ್ರಯದಲ್ಲಿ ಆಯೋಜಿಸಲಾದ ನವರಾತ್ರಿ ನಾಡಹಬ್ಬದ ಆರನೇ ದಿನದ ಧಾರ್ಮಿಕ ಹಾಗೂ ಚಿಂತನ ಕಾರ್ಯಕ್ರಮವು ಅತ್ಯಂತ ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಜರುಗಿತು.ಸಂಜೆ 7:00 ಗಂಟೆಗೆ ಶಕ್ತಿದೇವಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತದನಂತರ ಹಿರೇಕುಂಬಿಯ ಪವಾಡ ಬಸವೇಶ್ವರ ಭಜನಾ ಮಂಡಳಿಯವರಿಂದ ಜರುಗಿದ ಭಕ್ತಿಪೂರ್ವಕ ಭಜನಾ ಕಾರ್ಯಕ್ರಮವು ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧಗೊಳಿಸಿತು.


ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ದರಾಮ ಮಾತನಾಡಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿಯನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನವರಾತ್ರಿಯ ಈ ವಿಶೇಷ ದಿನದಂದು ಸಾರ್ವಜನಿಕರಿಗೆ ಉಪಯುಕ್ತವಾಗುವ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ನ್ಯಾಯಾಧೀಶರು, ಭಾರತದ ಸಂವಿಧಾನದ ಮೂಲಭೂತ ತತ್ವಗಳು, ಸಾರ್ವಜನಿಕರಿಗೆ ಲಭ್ಯವಿರುವ ಕಾನೂನು ಸಲಹೆಗಳು ಹಾಗೂ ಮಹಿಳೆಯರ ಆಸ್ತಿ ಹಕ್ಕುಗಳ ಕುರಿತು ವಿಸ್ತೃತವಾದ ಹಾಗೂ ಉಪಯುಕ್ತ ಮಾಹಿತಿಯನ್ನು ನೀಡಿದರು.


ಕಾನೂನಿನ ಸರಿಯಾದ ಅರಿವು ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸಲು ಸಹಕಾರಿ ಎಂಬುದನ್ನು ಮನವರಿಕೆ ಮಾಡಿಕೊಡುವ ಮೂಲಕ ಜನತೆಯಲ್ಲಿ ಕಾನೂನು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶೆ ಅರ​‍್ಿತಾ ಬಿ. ಬೆಲ್ಲದ ಅವರು ಮಾತನಾಡಿ, ಸಮಾಜದಲ್ಲಿ ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗಾಗಿ ಜಾರಿಯಲ್ಲಿರುವ ಕಾಸೂನುಗಳ ಕುರಿತು ಸಾರ್ವಜನಿಕರಿಗೆ ಅಮೂಲ್ಯವಾದ ಹಾಗೂ ಅತ್ಯಾವಶ್ಯಕ ಜಾಗೃತಿ ಮಾಹಿತಿಗಳನ್ನು ಒದಗಿಸಿದರು.ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಈ ಕಾಯಿದೆಯು ಹೇಗೆ ಸಹಕಾರಿಯಾಗಿದೆ ಎಂಬುದನ್ನು ತಿಳಿಸಿದರು.


ಜೊತೆಗೆ, ಸಾರ್ವಜನಿಕರು ಲೈಂಗಿಕ ದೌರ್ಜನ್ಯಗಳ ವಿರುದ್ಧ ಮೌನ ಮುರಿದು ಧ್ವನಿ ಎತ್ತುವ ಮೂಲಕ ಮಕ್ಕಳ ಸುರಕ್ಷತೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಮುನವಳ್ಳಿ ಮಾತನಾಡಿದರು. ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮದಲ್ಲಿ ಕಾನೂನು ವೇದಿಕೆಯ ಪ್ರಧಾನ ಸಿವಿಲ್ ನ್ಯಾಯಾಧೀಶ ದೇವದಾಸ ಎಚ್, ರಾಜಾರಾಮ ಮಠದ ಗಂಗಾಧರ, ತನುಜಾ ಹನಸಿ, ಫಕೀರ​‍್ಪ ಕಾಳೆ,ಪ್ರೆಮನಾಥ ಕುಂಕುಮಗಾರ,ಜಗದೀಶ್ ಅಗಡಿ,ಉದಯಕುಮಾರ್ ನಾಗನೂರ, ಮಲ್ಲಾರ ದೀಕ್ಷಿತರು, ಪದಾಧಿಕಾರಿಗಳು, ವಕೀಲರು, ಸ್ಥಳೀಯ ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ದೇವಿಯ ಪ್ರಸಾದ ಸ್ವೀಕರಿಸಿದರು. 


ಸುದ್ದಿ ಓದಿ