ರಾಣೆಬೆನ್ನೂರ ನಗರಸಭಾ ಸಭೆ ಸದಸ್ಯರ ಗದ್ದಲದ ಮಧ್ಯ ಗೊಂದಲದ ಗೂಡಾದ ಸಭೆ
ರಾಣೆಬೆನ್ನೂರ 24: ಸ್ಥಳೀಯ ನಗರಸಭೆಯ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರುಗಳ ಸಾಮಾನ್ಯ ಸಭೆಯಲ್ಲಿ ಬಹುತೇಕ ಕಾಮಗಾರಿಗಳಿಗೆ ಸಭೆಯು ಸರ್ವಾನುಮತದಿಂದ ಮಂಜೂರಾತಿಯ ಜೊತೆಗೆ ಅನುಮೋಧನೆ ನೀಡಿತಲ್ಲದೇ ನೂತನವಾಗಿ ನಿರ್ಮಾಣಗೊಂಡಿರುವ ಎಂಜಿ ರಸ್ತೆಯ ವಾಣಿಜ್ಯ ಮಳಿಗೆ ಹರಾಜು, ಪೂರ್ವ ಪಶ್ಚಿಮ ಬಡಾವಣೆ ನಿವೇಶನ ಮತ್ತು 24ು*7 ನಿರಂತರ ಕುಡಿಯುವ ನೀರು ಯೋಜನೆ, ಜಮಾ ಖರ್ಚುಗೆ ಸಂಭಂದಿಸಿದಂತೆ ಇತರ ವಿಷಯಗಳ ಕುರಿತು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಮಧ್ಯ ಮಾತಿನ ಚಕಮಿಕಿಯಿಂದಾಗಿ ನಡೆದ ಗದ್ದಲದಿಂದಾಗಿ ಸಭೆ ಗೊಂದಲಮಯ ಪರಿಸ್ಥಿತಿ ನಿರ್ಮಾಣವಾಯಿತು.
ಸಭೆಗೂ ಮುನ್ನ ಸಾಮಾನ್ಯ ಸಭೆ ಏಕೆ ಕರೆಯಲಿಲ್ಲ, ಈ ಹಿಂದೆ ಮೂರು ವಿಶೇಷ ಸಭೆ ಕರೆದಿದ್ದೀರಿ, ಸಭೆ ಕರೆಯಲು ಏಕೆ ವಿಳಂಬ ಮಾಡಿದ್ದೀರಿ ಎಂದು ವಿರೋಧ ಪಕ್ಷದ ನಿಂಗರಾಜ ಕೋಡಿಹಳ್ಳಿ ಆಕ್ಷೇಪ ಎತ್ತಿದಾಗ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯ ವಿಷಯಾಂತರಗೊಂಡು ಮಾತಿನ ಚಕಮಿಕಿ ನಡೆದು ಗದ್ದದ ಜೊತೆಗೆ ಗೊಂದಲಮಯ ವಾತಾವರಣ ಉಂಟಾಯಿತು. ಸಭೆ ಆರಂಭದಿಂದ ಅಂತಿಮವರೆಗೂ ಹಿಗೆಯೇ ಮುಂದುವರೆದಿದ್ದು ಸಾಮಾನ್ಯವಾಗಿತ್ತು.
ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಮಧ್ಯೆ ಪ್ರವೇಶಿಸಿ ಹಾನಗಲ್ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿತ್ತು ಅದಕ್ಕಾಗಿ ಸಭೆ ಕರೆದಿಲ್ಲ, ವಿಷಯಾಂತರ ಮಾಡಬೇಡಿ ನೇರವಾಗಿ ವಿಷಯಕ್ಕೆ ಬನ್ನಿ ಎಂದು ಹೇಳಿದರೂ ಮಾತಿನ ಚಕಮಿಕಿ ಮುಂದುವರೆಯಿತು. ಆಡಳಿತ ಪಕ್ಷದ ಪ್ರಕಾಶ ಬುರಡಿಕಟ್ಟಿ, ಮಲ್ಲಣ್ಣ ಅಂಗಡಿ, ಪ್ರಕಾಶ ಪೂಜಾರ ವಿಪದ ಪುಟ್ಟಪ್ಪ ಮರಿಯಮ್ಮನವರ, ನಾಗರಾಜ ಅಡ್ಮನಿ ಮಧ್ಯ ಚರ್ಚೆ ನಡೆದು ಮತ್ತೆ ಗೊಂದಲಮಯವಾಯಿತು.
24*7 ನೀರಿನ ಯೋಜನೆಗೆ ಓಷಧಿ ಖರೀದಿಗೆ 50 ಲಕ್ಷ ರೂ ಮಂಜೂರಿಗಾಗಿ ಟೆಂಡರ್ ವಿಷಯ ಪ್ರಸ್ತಾಪಗೊಂಡಾಗ ಆಡಳಿತ ಪಕ್ಷದ ಸದಸ್ಯರೇ ಮತ್ತೆ ಆಕ್ಷೇಪ ಮಾಡಿ ಇನ್ನೂ ಪೂರ್ಣವಾಗಿ ಈ ಯೋಜನೆ ಜಾರಿಯಾಗಿಲ್ಲ, ಕಲುಷಿತ ನೀರು ಪೂರೈಕೆಯಾಗುತ್ತಿದೆ, ಇನ್ನೂ ಕೆಲವೆಡೆ ನಳ ಸಂಪರ್ಕ ಮಾಡಿಲ್ಲ, ನಿರ್ವಹಣೆ ಸರಿಯಾಗಿಲ್ಲ ಎಂದು ಸದಸ್ಯರುಗಳು ಆರೋಪಿಸಿದರು. ವಾಣಿಜ್ಯ ಮಳಿಗೆ ಹರಾಜು ವಿಷಯ ಮತ್ತು ಪೂರ್ವ ಪಶ್ಚಿನ ಬಡಾವಣೆಯ ವಿಷಯಗಳು ಸಭೆಯಲ್ಲಿ ಆಡಳಿತ ಮತ್ತು ವಿಪ ಸದಸ್ಯರುಗಳ ಮಧ್ಯ ಗಂಭೀರವಾದ ಚರ್ಚೆ ನಡೆದು ಮುಂದಿನ ಸಭೆಗೆ ವಿಷಯ ತರಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯುದ್ದಕ್ಕೂ ಆಡಳಿತ ಮತ್ತು ವಿಪ ಸದಸ್ಯರ ಮಧ್ಯ ಪ್ರತಿ ವಿಷಯಕ್ಕೂ ಆರೋಪ ಪ್ರತ್ಯಾರೋಪಗಳು ಕೇಳಿ ಬಂದವು. ಒಂದೇ ಸಾರಿ 4ಕ್ಕೂ ಅಧಿಕ ಸದಸ್ಯರುಗಳು ಮೇಲೆದ್ದು ಚರ್ಚೆಯಲ್ಲಿ ಭಾಗವಹಿಸಿ ಸಭೆಯ ಶಿಷ್ಟಾಚಾರ ಉಲ್ಲಂಘಿಸಿ ಗೌರವ-ಘನತೆಗೆ ದಕ್ಕೆ ತಂದದ್ದು ಕಂಡು ಬಂದಿತು.
ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ನಗರಸಭೆ ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಪೌರಾಯುಕ್ತ ಉದಯಕುಮಾರ ಬಿಟಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತಿತರರು ಇದ್ದರು.