ರಮ್ಯ @ 39: ಅಭಿಮಾನಿಗಳ ಹಾರೈಕೆ
ಬೆಂಗಳೂರು, ನ. 29: ಮೋಹಕತಾರೆ ರಮ್ಯ 39ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು,ಹಿತೈಷಿಗಳು ಶುಭ ಹಾರೈಸಿದ್ದಾರೆ.
ನಟಿ ರಚಿತಾ ರಾಮ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಕಲಾವಿದರು ರಮ್ಯಾ ಭಾವಚಿತ್ರವನ್ನು ಜಾಲತಾಣದಲ್ಲಿ ಶೇರ್ ಮಾಡಿ ಜನ್ಮದಿನದಂದು ಶುಭ ಕೋರಿದ್ದಾರೆ.
ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಅನಭಿಷಕ್ತ ನಾಯಕಿಯಾಗಿ ಆಳಿ, ರಾಜಕಾರಣದಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾದ ಚೆಲುವೆ ಚೊಚ್ಚಲ ಸ್ಪರ್ಧೆಯಲ್ಲಿಯೇ ಜನರ ಆಶೀರ್ವಾದ ಗಳಿಸಿಕೊಂಡರು. ಆದಾಗ್ಯೂ ನಿರೀಕ್ಷಿಸಿದಷ್ಟು ಯಶಸ್ಸು ದೊರೆಯದಿದ್ದಾಗ ರಾಜಕಾರಣದಿಂದ ದೂರ ಸರಿದಿದ್ದರು.
ಒಂದು ವರ್ಷಗಳ ಕಾಲ ರಮ್ಯಾ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದೇ ಪ್ರೇಕ್ಷಕರಿಗೆ ಪ್ರಶ್ನೆಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿಯೂ ವರ್ಷಗಳ ಕಾಲ ಕಾಣಿಸಿಕೊಳ್ಳದ ರಮ್ಯಾ ಇತ್ತೀಚೆಗೆ ಸೋಶಿಯಲ್ ಮೀಡಿಯಾಕ್ಕೆ ಮರಳಿ ದೈನಂದಿನ ಚಟುವಟಿಕೆಗಳ ಬಗ್ಗೆ ಅಪ್ಡೇಟ್ ನೀಡುತ್ತಾ ಆ್ಯಕ್ಟೀವ್ ಆಗಿದ್ದದಾರೆ.
ರಮ್ಯಾ 39ನೇ ಹುಟ್ಟುಹಬ್ಬದ ದಿನದಂದು ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿರುವ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನರಾದ ವೇಳೆಯಲ್ಲಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿದ್ದ ನಟಿ ರಮ್ಯಾ, ಪುನೀತ್ ಕುರಿತು ಮಾಧ್ಯಮಗಳಲ್ಲಿ ಮಾತನಾಡುವಾಗ ಮತ್ತೆ ಚಿತ್ರರಂಗಕ್ಕೆ ಮರಳಬೇಕು ಎಂಬ ಆಸೆ ಇದೆ ಎನ್ನುವುದನ್ನು ಬಹಿರಂಗಪಡಿಸಿದ್ದರು. ಈ ಹಿಂದೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಳಿ ಸಿನಿಮಾ ಮಾಡಲು ಕೆಲ ಆಫರ್ ಬಂದಿವೆ, ಅವುಗಳಿಗೆ ನಾನು ಓಕೆ ಹೇಳಬೇಕೋ, ಬೇಡವೋ ಎಂದು ಯೋಚನೆ ಮಾಡುತ್ತಿದ್ದೇನೆ ಎಂದಿದ್ದ ರಮ್ಯಾ, ಪುನೀತ್ ನಿಧನರಾದ ದಿನ, ಮಾತನಾಡುವಾಗ ಪುನೀತ್ ಜೊತೆಗೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುವ ಆಸೆ ಇತ್ತು ಎಂದು ಹೇಳಿಕೊಂಡಿದ್ದರು.