ಹೊಸಪೇಟೆ

ಅರಿತು ಬಾಳಿದರೆ ಬಾಳು ಬಂಗಾರ: ರಂಭಾಪುರಿ ಶ್ರೀ

ಅರಿತು ಬಾಳಿದರೆ ಬಾಳು ಬಂಗಾರ: ರಂಭಾಪುರಿ ಶ್ರೀ

ರಂಭಾಪುರಿ ಪೀಠ (ಬಾಳೆಹೊನ್ನೂರು) 14: ಅಜ್ಞಾನ ಮತ್ತು ಅಶಿಸ್ತು ಮನುಷ್ಯನ ಪ್ರಗತಿಗೆ ಅಡ್ಡಿ. ಅರಿವಿನಿಂದ ಅಸ್ತಿತ್ವವು ಅಕ್ಷಯವಾಗುತ್ತದೆ. ನೀತಿ ನಿಯಮ ಇಲ್ಲದ ಸಮಾಜ, ನಾಡು ಬೆಳಯಲಾರದು. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಬಾಳಿದರೆ ಬಾಳು ಬಂಧನಕಾರಿಯಾಗುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ಅವರು ಶ್ರೀ ರಂಭಾಪುರಿ ಪೀಠದಲ್ಲಿ 30ನೇ ವರ್ಷದ ವರ್ಧಂತಿ ಮಹೋತ್ಸವ-ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 

ಮಾನವನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ, ಅಷ್ಟೇ ಉಜ್ವಲ ಭವಿಷ್ಯಕ್ಕೆ ಪೂರ್ವಜರ ಚಿಂತನೆಗಳು ಮುಖ್ಯ. ಮಾನವನ ಬದುಕು ಅರಿವಿನಿಂದ ಕೂಡಿರಬೇಕು. ಮಾತು ಕಡಿಮೆಯಾಗಿ ಮಾಡುವ ಕೆಲಸ ಕಾರ್ಯಗಳು ಹೆಚ್ಚಾಗಬೇಕು. ಮಾತಿಗೆ ತೂಕ ಬರುವುದು ಸತ್ಯದಿಂದಲ್ಲದೇ ಅಸತ್ಯದಿಂದಲ್ಲ. ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾಮರಸ್ಯ ನೆಲೆಗೊಳ್ಳಲು ಸಾಧ್ಯ. ತಾಯಿ ಬೇರು ಗಟ್ಟಿಗೊಂಡರೆ ಆ ಮರ ಚಿಗುರಿ, ಪಲ್ಲವಿಸಿ, ಫಲ ಕೊಡುತ್ತದೆ. ಮೂಲ ನಂಬಿಕೆಯನ್ನು ಮೂಢ ನಂಬಿಕೆ ಎನ್ನದೇ ಸತ್ಯವನ್ನು ಅರಿಯುವ ಪ್ರಯತ್ನ ಮಾಡಬೇಕಾಗಿದೆ. 29 ಸಂವತ್ಸರ ಪೂರ್ಣಗೊಂಡು ಇಂದು 30 ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ಅಪೂರ್ವ ಸಂದರ್ಭವಿದು. ಈ ಅವಧಿಯಲ್ಲಿ ಮಾಡಿದ ಧರ್ಮ ಕಾರ್ಯಗಳು ಮತ್ತು ಸಾಮಾಜಿಕ ಕಾರ್ಯಗಳು ತೃಪ್ತಿ ತಂದಿವೆ. ಇನ್ನೂ ಮಾಡಬೇಕಾದ ಕೆಲಸ ಬಹಳಷ್ಟಿದೆ. ಮಹಾಗುರುವಿನ ಅನುಗ್ರಹದಿಂದ ಪೂರ್ಣಗೊಳಿಸುವ ಶಕ್ತಿಯನ್ನು ಭಗವಂತ ದೊರಕಿಸಿ ಕೊಡಲೆಂದು ಪ್ರಾರ್ಥಿಸಿದರು. 

04 ದಿನಗಳಿಂದ ನಡೆದುಕೊಂಡು ಬಂದ ಶತರುದ್ರ ಯಾಗ 05 ನೇ ದಿನದಲ್ಲಿ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು. ಪರಂಪರೆಯಿಂದ ಬಂದ ಬೆಳ್ಳಿ ವೀರಸಿಂಹಾಸನವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪೂಜೆ ಸಲ್ಲಿಸಿ ಆರೋಹಣ ಮಾಡಿದರು. ಇದೇ ಸಂದರ್ಭದಲ್ಲಿ ಆಗಮಿಸಿದ ಶಿವಾಚಾರ್ಯ ಸಮೂಹ ಜಗದ್ಗುರುಗಳ ಪಾದಪೂಜೆಯನ್ನು ನೆರವೇರಿಸಿದರು. 

ನಂತರ ನಡೆದ ಧರ್ಮ ಸಮಾರಂಭದಲ್ಲಿ ಪಾಲ್ಗೊಂಡ ಸೂಡಿ ಜುಕ್ತಿ ಹಿರೇಮಠದ ಡಾ|| ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಎಮ್ಮಿಗನೂರು ವಾಮದೇವ ಮಹಂತ ಶಿವಾಚಾರ್ಯರು, ಕಣ್ವಕುಪ್ಪಿ ಡಾ|| ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಸುಳ್ಳ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಮಾತನಾಡಿ ಶ್ರೀ ರಂಭಾಪುರಿ ಜಗದ್ಗುರುಗಳವರ ಕ್ರಿಯಾಶೀಲ, ರಚನಾತ್ಮಕ ಮತ್ತು ಅಭಿವೃದ್ಧಿ ಕಾರ್ಯಗಳ ಬಗೆಗೆ ಸವಿಸ್ತಾರವಾಗಿ ಭಕ್ತ ಸಮೂಹಕ್ಕೆ ಮನವರಿಕೆ ಮಾಡಿಕೊಟ್ಟರು.  ಕಾರ್ಜುವಳ್ಳಿ, ಸಂಗೊಳ್ಳಿ, ಅರಗಿನಡೋಣಿ, ಸಿಂಧನೂರು, ದೊಡ್ಡನಗರ, ಕೊಟ್ಟೂರು, ಲಿಂಗದಹಳ್ಳಿ, ಚಿಮ್ಮಲಗಿ, ಯಸಳೂರು, ದೇವರಭೂಪುರ, ಬೇರುಗಂಡಿ, ಶಿರಿಸ್ಯಾಡ ಮೊದಲ್ಗೊಂಡು ಹಲವಾರು ಮಠಾಧೀಶರರು ಪಾಲ್ಗೊಂಡಿದ್ದರು.  

ಶತರುದ್ರಯಾಗ ನೇತೃತ್ವ ವಹಿಸಿದ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಮತ್ತು ಪ್ರಧಾನ ಪುರೋಹಿತರಾದ ವೇದವಿದ್ವಾಂಸ ಬೆಂಗಳೂರಿನ ಶ್ರೀ ಚನ್ನಬಸವಾರಾಧ್ಯ ಮತ್ತು ತಂಡದವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶಾಲು ಹೊದಿಸಿ ಫಲ, ತಾಂಬೂಲವಿತ್ತು ಶುಭ ಹಾರೈಸಿದರು. ನಂಜೇಗೌಡರು, ಶಿವಶಂಕರ ಪಾಲ್ಗೊಂಡಿದ್ದರು. ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ ಸ್ವಾಗತಿಸಿದರು ಶಿವಮೊಗ್ಗದ ಶಾಂತಾ ಆನಂದ ಪ್ರಾರ್ಥನೆ ಸಲ್ಲಿಸಿದರು.

ಸುದ್ದಿ ಓದಿ