ಸಮರಸ ಸೌಭಾಗ್ಯಕ್ಕೆ ಸೋಪಾನ: ರಂಭಾಪುರಿ ಜಗದ್ಗುರುಗಳು
ರಾಣೇಬೆನ್ನೂರು 09: ಪರಮಾತ್ಮನ ಸೃಷ್ಟಿಯನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲವನ್ನು ಅವನೇ ಸೃಷ್ಟಿಸಿದ್ದರೂ ಒಬ್ಬರಂತೆ ಇನ್ನೊಬ್ಬರಿಲ್ಲ. ಸಮರಸ ಜೀವನ ಸೌಭಾಗ್ಯಕ್ಕೆ ಸೋಪಾನ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಗುರುವಾರ ಅವರು ಸಮೀಪದ ಕೊಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ತುಂಗಾರತಿ ಪೂರ್ವಭಾವಿ ಶುಭಾಗಮನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜೀವನ ಅರಿತು ಬಾಳುವುದರಲ್ಲಿ ಸುಖ ಶಾಂತಿಯಿದೆ. ಬದುಕಿನ ಉನ್ನತಿ ಉತ್ಕರ್ಷತೆಯಿದೆ. ಮನುಷ್ಯ ದೊಡ್ಡ ಮಾತುಗಳನ್ನು ಮಾತನಾಡುವನೇ ವಿನ: ದೊಡ್ಡ ಗುಣದಿಂದ ಬದುಕಲಾರ. ಜನ ಹಿತ ಲೋಕ ಕಲ್ಯಾಣಕ್ಕಾಗಿ ಅವತರಿಸಿದ ಹಲವಾರು ಮಹಾನುಭಾವರು ತಾವು ನೋವು ತಿಂದು ಸಮಾಜಕ್ಕೆ ಒಳಿತನ್ನು ಮಾಡಿದ್ದಾರೆ. ಮೌಲ್ಯಗಳ ಅಳಿವು ಉಳಿವು ಮನುಷ್ಯನ ಆಚರಣೆಯಲ್ಲಿವೆ. ನೀತಿ ಸಂಹಿತೆ ಅರಿತವನಿಗೆ ನೆಮ್ಮದಿಯ ಫಲ ಸಿಗುವುದರಲ್ಲಿ ಯಾವುದೇ ಸಂದೇಹವಿಲ್ಲ. ತಾಳ್ಮೆ ಮತ್ತು ಸಹನೆಯ ಗುಣ ಮನುಷ್ಯನಲ್ಲಿ ಇಲ್ಲದಿರುವುದೇ ಇಂದಿನ ಅಶಾಂತಿ ಅತೃಪ್ತಿಗಳಿಗೆ ಕಾರಣವೆಂದರೆ ತಪ್ಪಾಗದು. ವೀರಶೈವ ಧರ್ಮ ಪ್ರಾಚೀನವಾಗಿದ್ದು ಸಕಲ ಜೀವಾತ್ಮರಿಗೆ ಒಳಿತನ್ನೇ ಮಾಡುತ್ತಾ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮೌಲ್ಯಾಧಾರಿತ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮಿಗಳು ಭಕ್ತರ ಕಲ್ಯಾಣಕ್ಕಾಗಿ ವಿಶ್ವ ಶಾಂತಿಗಾಗಿ ಕೈಕೊಂಡ ಸಂಕಲ್ಪಗಳು ಪರಿಪೂರ್ಣಗೊಳ್ಳಲೆಂದು ಆಶಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಮಂಗಳಗೌರಿ ಅರುಣಕುಮಾರ ಪೂಜಾರ ಸಸಿಗೆ ನೀರು ಎರೆಯುವುದರ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದು ಉಪದೇಶಾಮೃತವನ್ನಿತ್ತರು. ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಚೇತನ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಹಲವಾರು ಗಣ್ಯರು ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಹರಸಿದರು.
ಸಮಾರಂಭಕ್ಕೂ ಮುನ್ನ ಹರಿಹರದ ಹರಿಹರೇಶ್ವರ ದೇವಸ್ಥಾನದಿಂದ ಪುಣ್ಯಕೋಟಿ ಮಠದ ವರೆಗೆ ಸಂಭ್ರಮದಿಂದ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಬರಮಾಡಿಕೊಂಡ ದೃಶ್ಯ ಅಪೂರ್ವವಾಗಿತ್ತು.