ರಾಮ ದೇಗುಲದ ಭೂಮಿ ಪೂಜೆ ವೇಳೆ ಪ್ರಧಾನಿಯಿಂದ ಅಂಚೆಚೀಟಿ ಬಿಡುಗಡೆ
ಅಯೋಧ್ಯಾ, ಜುಲೈ 30 (ಯುಎನ್ಐ) ಭವ್ಯವಾದ ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸುವ ನಿರೀಕ್ಷೆಯಿದ್ದು, ಇದೇ ಸಂದರ್ಭದಲ್ಲಿ ಅವರು ಅಂಚೆಚೀಟಿಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಒಂದು ಬಗೆಯ ಅಂಚೆಚೀಟಿ ರಾಮ ದೇವಾಲಯವನ್ನು ಸಂಕೇತಿಸಿದರೆ, ಮತ್ತೊಂದು ಅಂಚೆಚೀಟಿ ಭಗವಾನ್ ಶ್ರೀರಾಮನ ಮಹತ್ವವನ್ನು ಚಿತ್ರಿಸಲಿದೆ ಎನ್ನಲಾಗಿದೆ.
ಮತ್ತೊಂದೆಡೆ, ಅಯೋಧ್ಯೆ ಸಂಶೋಧನಾ ಸಂಸ್ಥೆ, ವಿಶ್ವದ ವಿವಿಧೆಡೆ ಶ್ರೀರಾಮನ ಸಾಂಸ್ಕೃತಿಕ ಉಪಸ್ಥಿತಿಯನ್ನು ಚಿತ್ರಿಸುವ ರಾಮ್ ಲೀಲಾದ ದೊಡ್ಡ ಪೋಸ್ಟರ್ ಗಳು ಹಾಗೂ ಕಟೌಟ್ ಗಳನ್ನು ಮುದ್ರಿಸುತ್ತಿದ್ದು, ಇದನ್ನು ರಾಮ ದೇಗುಲದ ಮಾರ್ಗದಲ್ಲಿ ಇಡಲು ನಿರ್ಧರಿಸಿದೆ.
ಪ್ರಧಾನಿ ಮೋದಿಯವರು ಅಯೋಧ್ಯೆಯ ಸಾಕೇತ್ ಪದವಿ ಕಾಲೇಜಿನ ಬಳಿ ಹೆಲಿಕಾಪ್ಟರ್ ನಿಂದ ಇಳಿದು, ಶ್ರೀರಾಮ ದೇವಾಲಯ ನಿರ್ಮಾಣದ ಸ್ಥಳಕ್ಕೆ ತೆರಳಲಿದ್ದಾರೆ, ಈ ವೇಳೆ 4.5 ಕಿಲೋಮೀಟರ್ ಮಾರ್ಗದ 25 ಸ್ಥಳಗಳಲ್ಲಿ ರಾಮಚರಿತಮಾನಸದ ತಡೆರಹಿತ ಪಠನೆಗೆ ಸಿದ್ಧತೆ ನಡೆಯುತ್ತಿದೆ.
ಆಗಸ್ಟ್ 5 ಕ್ಕೆ ನಗರವನ್ನು ಸಿದ್ಧಪಡಿಸಲು, ಗೋಡೆಗಳು ಮತ್ತು ಕಂಬಗಳನ್ನು ರಾಮನ ಚಿತ್ರಗಳು ಮತ್ತು ರಾಮಾಯಣದ ದೃಶ್ಯಗಳಿಂದ ಚಿತ್ರಿಸಲಾಗುತ್ತಿದ್ದು, ವಿವಿಧ ವರ್ಣಗಳಿಂದ ಅಲಂಕರಿಸಲಾಗಿದೆ.