ರಾಷ್ಟ್ರೀಯ

ಮೂರು ಸಶಸ್ತ್ರಪಡೆಗಳ ಮುಖ್ಯಸ್ಥರೊಂದಿಗೆ ರಾಜನಾಥ್ ಸಿಂಗ್ ಮಹತ್ವದ ಭೇಟಿ

ಮೂರು ಸಶಸ್ತ್ರಪಡೆಗಳ ಮುಖ್ಯಸ್ಥರೊಂದಿಗೆ  ರಾಜನಾಥ್ ಸಿಂಗ್  ಮಹತ್ವದ ಭೇಟಿ

ನವದೆಹಲಿ, ಸೆಪ್ಟೆಂಬರ್ 11: ಭಾರತ-ಚೀನಾ ಗಡಿಯಲ್ಲಿ  ಉದ್ಭವವಾಗಿರುವ  ಉದ್ವಿಗ್ನತೆ ಪರಿಸ್ಥಿತಿ  ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಶಸ್ತ್ರಪಡೆಗಳ  ಮುಖ್ಯಸ್ಥರು ಸಿಡಿಎಸ್   ಹಾಗೂ  ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಶುಕ್ರವಾರ  ಮಹತ್ವದ ಸಭೆ ನಡೆಸಿದರು. 

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್  ಅವರೂ    ಪಾಲ್ಗೊಂಡಿದ್ದ ಈ ಸಭೆಯಲ್ಲಿ   ವಾಸ್ತವ  ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿನ  ಪರಿಸ್ಥಿತಿಯನ್ನು ಪರಾಮರ್ಶಿಸಿದರು.

ಪೂರ್ವ ಲಡಾಕ್‌ನಲ್ಲಿ ಸುದೀರ್ಘವಾಗಿ ಮುಂದುವರಿದಿರುವ  ಗಡಿ  ಬಿಗುವಿನ ಪರಿಸ್ಥಿತಿ  ಕುರಿತು   ಗುರುವಾರ ಮಾಸ್ಕೋದಲ್ಲಿ  ವಿದೇಶಾಂಗ ವ್ಯವಹಾರಗಳ  ಸಚಿವ ಎಸ್.ಜೈಶಂಕರ್,  ಚೀನಾದ ವಿದೇಶಾಂಗ ಸಚಿವ ವಾಂಗ್ ವೀ  ಭೇಟಿ ಮಾಡಿ   ಮಾತುಕತೆ  ನಡೆಸಿದ  ಬೆನ್ನಲ್ಲೇ  ರಾಜನಾಥ್ ಸಿಂಗ್ ಮೂರು ಪಡೆಗಳ ಮುಖ್ಯಸ್ಥರೊಂದಿಗೆ ಸಭೆ  ನಡೆಸಿರುವುದು ಮಹತ್ವಪಡೆದುಕೊಂಡಿದೆ.

ಸುಮಾರು ಎರಡು ಗಂಟೆಗಳಿಗೂ   ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಗಡಿಯಲ್ಲಿನ ಪರಿಸ್ಥಿತಿ,  ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ಚೀನಾದ ಸಹವರ್ತಿಯೊಂದಿಗಿನ  ಮಾತುಕತೆ ಅಂಶಗಳನ್ನು  ಸಮೀಕ್ಷಿಸಿದರು.

ಭಾರತ -ಚೀನಾ  ಸೇನಾ  ಕಮಾಂಡರ್‌ಗಳ ಮಟ್ಟದಲ್ಲಿ   ನಡೆದ ಚರ್ಚೆಯಲ್ಲಿ  ಪ್ರಸ್ತಾಪವಾದ  ಅಂಶಗಳ ಬಗ್ಗೆಯೂ  ಚರ್ಚಿಸಿದರು.  ಗಡಿ ಸಂಘರ್ಷ ತಪ್ಪಿಸುವುದಕ್ಕಾಗಿ  ಐದು  ಅಂಶಗಳ  ಯೋಜನೆಯನ್ನು ಅನುಸರಿಸಲು  ಗುರುವಾರ  ಉಭಯ ದೇಶಗಳು ಅಂಗೀಕರಿಸಿವೆ. ಅಸ್ತಿತ್ವದಲ್ಲಿರುವ ಎಲ್ಲಾ ಒಪ್ಪಂದಗಳು, ಶಿಷ್ಠಾಚಾರಗಳು ಹಾಗೂ  ನಿಯಮಾವಳಿಗಳನ್ನು ಪಾಲಿಸಬೇಕು, ಉದ್ವಿಗ್ನತೆಯನ್ನು ಶಮನಗೊಳಿಸಿ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು  ಐದು ಅಂಶಗಳ  ಯೋಜನೆಯಲ್ಲಿ ನಿರ್ಣಯಿಸಲಾಗಿದೆ.  

ಮತ್ತೊಂದೆಡೆ, ಪೂರ್ವ ಲಡಾಖ್‌ನಲ್ಲಿ  ಚೀನಾ ತನ್ನ ಪಡೆಗಳನ್ನು ಭಾರಿ ಪ್ರಮಾಣದಲ್ಲಿ ಜಮಾಯಿಸುತ್ತಿರುವ  ಹಿನ್ನಲೆಯಲ್ಲಿ  ಭಾರತೀಯ ಪಡೆಗಳನ್ನು ಎಚ್ಚರಿಸಲಾಗಿದೆ. ಗಡಿಯಲ್ಲಿ  ಚೀನಾದ ಪ್ರಚೋದನೆಗಳನ್ನು ಹಿಮ್ಮೆಟ್ಟಿಸಲು   ಭಾರತ ಸೇನೆ ತಯಾರಿ ನಡೆಸುತ್ತಿದೆ. ಎಲ್‌ಎಸಿ  ಬಳಿಯ ಉದ್ವಿಗ್ನತೆಯ ನಡುವೆಯೂ  ಉಭಯ ದೇಶಗಳ ನಡುವೆ  ಸೇನಾ ಕಮಾಂಡರ್‌ಗಳ ಮಟ್ಟದ ಮಾತುಕತೆ ಶುಕ್ರವಾರವೂ ಮುಂದುವರಿದಿದೆ.

ಸುದ್ದಿ ಓದಿ