ಅಭಿಮಾನಿಗಳ ಮನ ರಂಜಿಸಿದ ರಾಜೇಶ ಕೃಷ್ಣನ್ ಸಂಗಡಿಗರು
ಲೋಕದರ್ಶನ ವರದಿ
ರಾಣಿಬೆನ್ನೂರ 06: ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ಚರ ಸ್ವಾಮಿ ಮಂದಿರದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಪ್ರದೇಶಾಭಿವೃದ್ದಿಗಾಗಿ ನಿರಂತರ 384ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮದ 9ನೇ ವರ್ಷದ ಶನೈಶ್ಚರ ಸ್ವಾಮಿಯ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಖ್ಯಾತ ಸಂಗೀತ ನಿರ್ದೇಶಕ ಮೆಲಾಡಿಕಿಂಗ್ ರಾಜೇಶಕೃಷ್ಣನ್‌ರವರ ಹಾಗೂ ಅವರ ಸಂಗಡಿಗರ ಸಂಗೀತ ಸುಧೆ ಕಾರ್ಯಕ್ರಮವು ಮಧ್ಯರಾತ್ರಿಯವರೆಗೂ ನಿರಂತರವಾಗಿ ನಡೆದು ನೆರೆದಿದ್ದ ಸಹಸ್ರಾರು ಜನರ ಮನ ತಣಿಸಿತಲ್ಲದೇ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ಹಿರೇಮಠ ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಹೇರೂರಿನ ಗುಬ್ಬಿನಂಜುಂಡ ಪಂಡಿತಾರಾಧ್ಯ ಸ್ವಾಮಿಗಳು, ಕೂಡಲದ ಗುರು ಮಹೇಶ್ವರ ಸ್ವಾಮಿಗಳು, ಸ್ವಾಗತ ಸಮಿತಿಯ ಅಧ್ಯಕ್ಷ ಎಸ್.ಎಸ್.ರಾಮಲಿಂಗಣ್ಣನವರ, ಕೊಟ್ರೇಶ ಡಾವಣಗೇರಿ, ರೈತ ಮುಖಂಡರಾದ ರವೀಂದ್ರಗೌಡ ಪಾಟೀಲ, ಡಿಳ್ಳೆಪ್ಪ ಸತ್ಯಪ್ಪನವರ ಸೇರಿದಂತೆ ಮತ್ತಿತರರು ಸಂಗೀತ ಸುಧೆ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಇದ್ದರು.
ಡಾ.ರಾಜಕುಮಾರ, ಉಪೇಂದ್ರ, ಪುನೀತ ರಾಜಕುಮಾರ, ರವಿಚಂದ್ರನ್, ಸಿ.ಅಶ್ವತ್, ಶಿವರಾಜಕುಮಾರ ಮತ್ತಿತರರು ನಟಿಸಿದ ಸಿನೇಮಾ ಹಾಡು, ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು. ಗಾಯಕರಾದ ಶಮಿತಾ ಮಲ್ನಾಡದ, ನಟರಾಜ, ಕಂಬದ ರಂಗಯ್ಯ, ಚನ್ನಪ್ಪ, ದಿವ್ಯಾ ರಾಮಚಂದ್ರ, ಪುಷ್ಪಾರತಿ ಸಂಗಡಿಗರು ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾದರು. ರಾಜೇಶ ಮತ್ತು ಹಾಡುಗಾರರ ತಾಳಕ್ಕೆ ತಕ್ಕಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿ, ಕೇಕೆ ಹಾಕಿ, ಶಿಳ್ಳೆ ಹೊಡೆದು ಮನ ತಣಿಸಿಕೊಂಡರು. ರಾತ್ರಿ 1-30ರವರೆಗೂ ಸುಧೀರ್ಘವಾಗಿ ನಡೆದ ಸಂಗೀತ ಸುಧೆಯ ಮಧ್ಯದಲ್ಲೂ ಅಭಿಮಾನಿಗಳು ಪಾಲ್ಗೊಂಡು ಕಲಾವಿದರಿಗೆ ಸ್ಪೂರ್ತಿ ನೀಡಿದ್ದು ವಿಶೇಷವಾಗಿತ್ತು.