ಮಳೆ ಕೊರತೆ: ಬರ ಘೋಷಿಸಿ ರೈತರಿಗೆ ತಲಾ 20 ಸಾವಿರ ಪರಿಹಾರಕ್ಕೆ ಒತ್ತಾಯ
ಸಂಬರಗಿ 22: ಕಳೆದ ಹಲವು ತಿಂಗಳಿಂದ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹಾನಿಯಾಗಿವೆ. ಕೂಡಲೇ ಸರ್ಕಾರ ಬರಗಾಲ ಘೋಷಿಸಿ, ಪ್ರತಿ ರೈತರ ಖಾತೆಗೆ ತಲಾ 20 ಸಾವಿರ ಪರಿಹಾರ ನೀಡಬೇಕು ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಿಂಗಪ್ಪ ಕೊಕಳೆ ಒತ್ತಾಯಿಸಿದರು.
ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಾಳಿಗೇರಿಗೆ ಆಗಮಿಸಿದ್ದ ಅವರು, ಪಕ್ಷದ ಕಾರ್ಯಕರ್ತರೊಂದಿಗೆ ವಿವಿಧ ಬೆಳೆಗಳನ್ನು ಪರೀಶೀಲಿಸಿ, ರೈತರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಪದೇಪದೇ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಬಾಳಿಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳೆಗಳು ಹಾಳಾಗಿದ್ದು, ರೈತರು ಕಣ್ಣೀರಿನಲ್ಲಿ ದಿನ ಕಳೆಯುವಂತಾಗಿದೆ. ಸರ್ಕಾರ ಕೇವಲ ಭರವಸೆ ನೀಡದೆ, ಬರಪೀಡಿತ ಪ್ರದೇಶಗಳನ್ನು ಪರೀಶೀಲಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಲಾಬಾದ್ನಲ್ಲಿ ರೈತರು ರಸ್ತೆ ತಡೆ ನಡೆಸಿದ್ದು, ಖಿಳೇಗಾಂವ್ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಅಪೂರ್ಣವಾಗಿರುವುದನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ಕೃಷ್ಣಾ ನದಿಯಿಂದ ಪೈಪ್ಲೈನ್ ಮೂಲಕ ಗಡಿ ಭಾಗದ ಕೆರೆಗಳನ್ನು ತುಂಬಿಸುವ ಕಾಮಗಾರಿಗೂ ಚಾಲನೆ ನೀಡಬೇಕು ಎಂದು ಹೇಳಿದರು.
ಸರ್ಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಬಿಜೆಪಿ ಪಕ್ಷದ ವತಿಯಿಂದ ಪ್ರತಿ ಗ್ರಾಮದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ನಿಂಗಪ್ಪ ಕೊಕಳೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಭೀಮಪ್ಪ ಚನ್ನಾರೆಡ್ಡಿ, ಲಕ್ಷ್ಮಣ ಸಂಕ್ರಾಂತಿ, ಪರಮೇಶ್ವರ ಚನ್ನಾರೆಡ್ಡಿ, ಮಹೇಶ ಚನ್ನಾರೆಡ್ಡಿ ಉಪಸ್ಥಿತರಿದ್ದರು.