ರಾಜ್ಯಗಳಿಗೆ ಜಿ ಎಸ್ ಟಿ ಪರಿಹಾರ ಬಾಕಿ, ಕೇಂದ್ರದ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ
ನವದೆಹಲಿ,ಅ 12 : ರಾಜ್ಯಗಳಿಗೆ ಜಿ ಎಸ್ ಟಿ ಪರಿಹಾರ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಕೇಂದ್ರ ಸರ್ಕಾರ, ಬದಲಾಗಿ ರಾಜ್ಯಗಳು ಆದಾಯ ಕೊರತೆ ತುಂಬಿಕೊಳ್ಳಲು ರಿಸರ್ವ್ ಬ್ಯಾಂಕ್ ನಿಂದ ಸಾಲ ಪಡೆಯುವಂತೆ ಸೂಚಿಸಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ ಜಿ ಎಸ್ ಟಿ ಪರಿಹಾರ ಪಾವತಿಸುವ ಬದಲು ಆರ್ ಬಿ ಐ ನಿಂದ ನೇರವಾಗಿ ಸಾಲ ಪಡೆದುಕೊಳ್ಳಬೇಕೆಂಬ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಸಮ್ಮತಿಸಿರುವ ಬಿಜೆಪಿ ಆಡಳಿತ ಸೇರಿದಂತೆ 21 ರಾಜ್ಯ ಸರ್ಕಾರಗಳನ್ನು ರಾಹುಲ್ ತರಾಟಗೆ ತೆಗೆದುಕೊಂಡಿದ್ದಾರೆ.
ರಾಜ್ಯಗಳಿಗೆ ಜಿಎಸ್ ಟಿ ಆದಾಯ ನೀಡುವ ಭರವಸೆ ಕೇಂದ್ರ ಸರ್ಕಾರ ನೀಡಿತ್ತು. ಪ್ರಧಾನಿ ಮೋದಿ ಹಾಗೂ ಕೊರೊನಾದಿಂದಾಗಿ ದೇಶದ ಆರ್ಥಿಕತೆ ಅಸ್ತವ್ಯಸ್ತಗೊಂಡಿದೆ. ಪ್ರಧಾನಿ ಮೋದಿ ಅವರು 1.4 ಲಕ್ಷ ಕೋಟಿ ಕಾರ್ಪೋರೇಟ್ ತೆರಿಗೆಗಳನ್ನು ಕಡಿತಗೊಳಿಸಿದ್ದಾರೆ, 8, 400 ಕೋಟಿ ರೂಪಾಯಿ ವೆಚ್ಚದಲ್ಲಿ ತಮಗಾಗಿ ಎರಡು ವಿಮಾನ ಖರೀದಿಸಿದ್ದಾರೆ. ರಾಜ್ಯಗಳಿಗೆ ನೀಡಲು ಕೇಂದ್ರದ ಬಳಿ ಹಣವಿಲ್ಲ, ಹಣಕಾಸು ಸಚಿವರು ಆರ್ ಬಿ ಐ ನಿಂದ ಸಾಲ ಪಡೆಯುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.ನಿಮ್ಮ ಮುಖ್ಯಮಂತ್ರಿಗಳು ನಿಮ್ಮ ಭವಿಷ್ಯವನ್ನು ಮೋದಿ ಅವರಿಗಾಗಿ ಒತ್ತೆಇಟ್ಟಿದ್ದಾರೆ? ಎಂದು ರಾಹುಲ್ ಗಾಂಧಿ ಬಿಜೆಪಿ ಆಡಳಿತ ರಾಜ್ಯಗಳ ಜನತೆಗೆ ಟ್ವೀಟ್ ನಲ್ಲಿ ಹೇಳಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ನಡೆದ ಜಿ ಎಸ್ ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಬಾಕಿ ಉಳಿಸಿಕೊಂಡಿರುವ ಜಿ ಎಸ್ ಟಿ ಪರಿಹಾರವನ್ನು ಪಡೆದುಕೊಳ್ಳಲು ರಿಸರ್ವ್ ಬ್ಯಾಂಕ್ ನ ವಿಶೇಷ ಕಿಟಿಕಿಯಿಂದ 97 ಸಾವಿರ ಕೋಟಿ ರೂಪಾಯಿ ಸಾಲ ಪಡೆದುಕೊಳ್ಳುವುದು ಅಥವಾ 2.35 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆಯಿಂದ ಸಾಲಪಡೆದುಕೊಳ್ಳುವ ಆಯ್ಕೆಗಳನ್ನು ರಾಜ್ಯಗಳಿಗೆ ನೀಡಿತ್ತು.1.10ಲಕ್ಷ ಕೋಟಿ ಪರಿಹಾರ ಕೊರತೆಯನ್ನು ಸಾಲವನ್ನಾಗಿ ಪಡೆಯಲು ಬಿಜೆಪಿ ಆಡಳಿತ ರಾಜ್ಯಗಳು ಸೇರಿದಂತೆ 21 ರಾಜ್ಯ ಸರ್ಕಾರಗಳು ಆಯ್ಕೆ ಮಾಡಿಕೊಂಡಿವೆ.