ಸರ್ಕಾರದ ಬಡ್ಡಿ ಮನ್ನಾ ಯೋಜನೆಯ ಅಧಿಸೂಚನೆ ಹೊರಡಿಸಿದ ಆರ್‌ಬಿಐ
ಮುಂಬೈ, ಅ 27 : ಲಾಕ್‌ಡೌನ್ ಅವಧಿಯಲ್ಲಿ ಸಾಲಗಾರರ ಬಡ್ಡಿ ಮನ್ನಾ ಮಾಡುವ ಸರ್ಕಾರದ ಯೋಜನೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಜೊತೆಗೆ, ಎಲ್ಲಾ ಸಾಲ ನೀಡುವ ಸಂಸ್ಥೆಗಳಿಗೆ ನಿಗದಿತ ಸಮಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಆರ್‌ಬಿಐ, ಸರ್ಕಾರ ಅಕ್ಟೋಬರ್ 23, 2020 ರಂದು ನಿಗದಿತ ಸಾಲ ಖಾತೆಗಳಲ್ಲಿ (2020 ಮಾ.1 ರಿಂದ ಆ.31) ಸಾಲಗಾರರಿಗೆ ಆರು ತಿಂಗಳ ಕಾಲ ಸಂಯುಕ್ತ ಬಡ್ಡಿ ಮತ್ತು ಸರಳ ಬಡ್ಡಿ ನಡುವಿನ ವ್ಯತ್ಯಾಸವನ್ನು ಎಕ್ಸ್-ಗ್ರೇಟಿಯಾ ಪಾವತಿ ನೀಡುವ ಯೋಜನೆ ಪ್ರಕಟಿಸಿದೆ. ಇದರ ಅನುಸಾರ ಮಾರ್ಚ್ 1 ರಿಂದ ಆಗಸ್ಟ್ 31ರವರೆಗಿನ ಅವಧಿಗೆ ಆಯಾ ಸಾಲ ನೀಡುವ ಸಂಸ್ಥೆಗಳಿಂದ ಸರಳ ಬಡ್ಡಿ ಮತ್ತು ಸಂಯುಕ್ತ ಬಡ್ಡಿ ನಡುವಿನ ವ್ಯತ್ಯಾಸವನ್ನು ಜಮಾ ಮಾಡುವ ಮೂಲಕ ಕೆಲವು ವರ್ಗದ ಸಾಲಗಾರರಿಗೆ ಎಕ್ಸ್-ಗ್ರೇಟಿಯಾ ಪಾವತಿ ಕಡ್ಡಾಯಗೊಳಿಸುತ್ತದೆ " ಎಂದಿದೆ.
ಈ ಯೋಜನೆ ಅನುಸಾರ ಸರ್ಕಾರ ಸಂಯುಕ್ತ ಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸವನ್ನು ಪಾವತಿಸಲಿದೆ. ಬಡ್ಡಿಯ ಮೇಲಿನ ಬಡ್ಡಿಯ ಎಕ್ಸ್-ಗ್ರೇಟಿಯಾ ಪಾವತಿ ಆರು ತಿಂಗಳ ಕಾಲ ಅನ್ವಯವಾಗಲಿದೆ ಮತ್ತು ಇದು ಆಯ್ದ ನಿರ್ದಿಷ್ಟ ಸಾಲಗಳಿಗೆ ಸೀಮಿತವಾಗಿರಲಿದೆ. ಕೆಲ ದಿನಗಳ ಹಿಂದೆ ಈ ಯೋಜನೆ ಜಾರಿಗೆ ತರುವ ಕುರಿತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.