ಕುಷ್ಟಗಿ

ಲೇಖಕರ ಪುಸ್ತಕಗಳ ಖರೀದಿಸಿ ಈ ಭಾಗದ ಸಾಹಿತ್ಯವನ್ನು ಪ್ರೋತ್ಸಾಹಿಸಿ: ನಬಿಸಾಬ ಸರಕಾರಕ್ಕೆ ಒತ್ತಾಯ

ಲೇಖಕರ ಪುಸ್ತಕಗಳ ಖರೀದಿಸಿ ಈ ಭಾಗದ ಸಾಹಿತ್ಯವನ್ನು ಪ್ರೋತ್ಸಾಹಿಸಿ: ನಬಿಸಾಬ ಸರಕಾರಕ್ಕೆ ಒತ್ತಾಯ

ಕುಷ್ಟಗಿ 15:  ಸ್ಥಗಿತಗೊಂಡಿರುವ 2018 ರಿಂದ 2022ನೇ ಸಾಲಿನ ವರೆಗಿನ ಕಲ್ಯಾಣ ಕರ್ನಾಟಕ ಭಾಗದ ಲೇಖಕರ ಪುಸ್ತಕಗಳ ಖರೀದಿಸಿ ಲೇಖಕರನ್ನು ಹಾಗೂ ಈ ಭಾಗದ ಸಾಹಿತ್ಯವನ್ನು ಪ್ರೋತ್ಸಾಹಿಸುವ ಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಸಂಘ ಸಂಸ್ಥೆಗಳ ಪ್ರತಿನಿಧಿ ನಬಿಸಾಬ ಕುಷ್ಟಗಿ ಮುಖ್ಯಮಂತ್ರಿಗಳು ಹಾಗೂ ಕಲ್ಯಾಣ ಕನಾಟಕ ಅಭಿವೃದ್ಧಿ ಸಮಿತಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯಿಸಿದರು.  

ಮಂಗಳವಾರ ಬೆಳಿಗ್ಗೆ ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಮೊದಲು ಕಲ್ಯಾಣ ಕರ್ನಾಟಕ ಭಾಗದ ಲೇಖಕರ ಪುಸ್ತಕಗಳ ಖರೀದಿಸಿ ಲೇಖಕರನ್ನು ಹಾಗೂ ಈ ಭಾಗದ ಸಾಹಿತ್ಯವನ್ನು ಪ್ರೋತ್ಸಾಹಿಸುವ ಸಂಸ್ಕೃತಿ ಇತ್ತು. ಆದರೆ 2018 ರಿಂದ ಈ ಕಾರ್ಯ ಸ್ಥಗಿತವಾಗಿದೆ.  

ಲೇಖಕರು, ಲೇಖಕರ ಸಂಘ, ಪ್ರಕಾಶಕರು ಹಲವಾರು ಬಾರಿ ಸಮಿತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಥಿಕತೆಯ ಪ್ರೋತ್ಸಾಹ ಇರದ ಕಾರಣ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿದೆ.  

ಈ ಭಾಗದಲ್ಲಿ ಈ ಹಿಂದಿನಿಂದಲೂ ಸಾಹಿತ್ಯ, ಜನಪದ, ಕಾವ್ಯ, ನಾಟಕ, ಇತಿಹಾಸ ರಚನೆಯ ಹಾಗೂ ದಾಖಲಾತಿಯ ಕೊರಗು ಇದೆ. ಅಲ್ಲದೆ ಲೇಖಕರು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ಕಾರಣ ಅವರಿಂದ ಇದೀಗ ಹೊಸ ಸಾಹಿತ್ಯ ರಚನೆಯಾಗುತ್ತಿಲ್ಲ.  

ಕಲ್ಯಾಣ ಕರ್ನಾಟಕದ ಲೇಖಕರಿಗೆ ಕಲ್ಯಾಣವಾಗಬೇಕಾದರೆ ನಿರುಪಯುಕ್ತವಾಗಿರುವ ಕಲ್ಯಾಣ ಕರ್ನಾಟಕ ಅನುದಾನದಲ್ಲಿ, ಸಾರ್ವಜನಿಕ ಗ್ರಂಥಾಲಯದಿಂದ ಮಾನ್ಯತೆ ಪಡೆದಿರುವ  2018ರಿಂದ 2022ರ ವರೆಗಿನ ಈ ಭಾಗದ ಲೇಖಕರ ಪುಸ್ತಕಗಳನ್ನು ಕನಿಷ್ಠ ಮಟ್ಟದಲ್ಲಾದರೂ ಖರೀದಿಸಲು ಈ ಮೂಲಕ ನಾನು ನಮ್ರವಾಗಿ ಒತ್ತಾಯಿಸುತ್ತೇನೆ. ಅಲ್ಲದೆ ಮುಂದೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಸಭೆಯಲ್ಲಿ ಈ  ವಿಷಯ ಚರ್ಚಿಸಿ ಮಾನ್ಯ ರಾಜ್ಯ ಕ.ಸಾ.ಪ ಅಧ್ಯಕ್ಷರ ಮೂಲಕ ಸರ್ಕಾರಕ್ಕೆ ಪರಿಷತ್ತಿನಿಂದ ಮನವಿ ಸಲ್ಲಿಸಲಾಗುವುದು.   

ಕಲ್ಯಾಣ ಕರ್ನಾಟಕ ಪ್ರತಿನಿಧಿಸುವ ಎಲ್ಲ ಜಿಲ್ಲೆಯ  ಶಾಸಕರುಗಳಿಗೆ, ಕಸಾಪ ಜಿಲ್ಲಾ ಅಧ್ಯಕ್ಷರ ಮುಖಾಂತರ ಮನವಿ ಸಲ್ಲಿಸಲು ಕೋರಲಾಗಿದೆ. ಈ ವಿಷಯಕ್ಕಾಗಿ ಒತ್ತಾಯಿಸಿ ಲೇಖಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಈ ಮೂಲಕ ನಾನು ಮನವಿ ಮಾಡಿಕೊಳ್ಳುತ್ತೇನೆ.  

ಮುಖ್ಯ ಮಂತ್ರಿಗಳು, ಕ.ಸಾ.ಪ ರಾಜ್ಯ ಅಧ್ಯಕ್ಷರು, ಮುಖ್ಯ ಕಾರ್ಯದರ್ಶಿಗಳು,ಆಯುಕ್ತರು, ಕಲಬುರಗಿ ವಿಭಾಗ.ಕಲಬುರಗಿ ಇವರಿಗೆ ಮನವಿ ಸಲ್ಲಿಸುತ್ತೇನೆ ಎಂದು ಹೇಳಿದರು.  

ಇದು ಲೇಖಕರ ಹಕ್ಕು ಆಗಿದ್ದು ಮುಂದೊಂದು ದಿನ ಲೇಖಕರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಬೇಕಾಗದ ಅನಿವಾರ್ಯ ಬಂದರೂ ಬರಬಹುದು ಎಂದು ಸರಕಾರಕ್ಕೆ ಎಚ್ಚರಿಸಿದರು.  

ಈ ಸಂದರ್ಭದಲ್ಲಿ ಕಸಾಪ ತಾಲೂಕ ಅಧ್ಯಕ್ಷ ವೀರೇಶ್ ಬಂಗಾರಶೆಟ್ಟರ್ ಉಪಸ್ಥಿತರಿದ್ದರು. 


ಸುದ್ದಿ ಓದಿ