ಮನರಂಜನೆ

ಇಂದು ಆರಮನೆ ಮೈದಾನದಲ್ಲಿ ಪುನೀತ್ ಪುಣ್ಯ ಸ್ಮರಣೆ

ಇಂದು ಆರಮನೆ ಮೈದಾನದಲ್ಲಿ ಪುನೀತ್ ಪುಣ್ಯ ಸ್ಮರಣೆ

 ಬೆಂಗಳೂರು: ನವೆಂಬರ್ 09  ಇಂದು (ನವೆಂಬರ್ 09) ಬೆಂಗಳೂರು ಅರಮನೆ ಮೈದಾನದಲ್ಲಿ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆ- ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜನೆಯಾಗಿದೆ.
 
ನಗರದ ಕಂಠೀರವ ಸ್ಟುಡಿಯೋದಲ್ಲಿ ನವೆಂಬರ್ 08ರಂದು ಪುನೀತ್ ಅವರ ಅಂತ್ಯಕ್ರಿಯೆ ನಡೆಸ ಸ್ಥಳದಲ್ಲಿ ಕುಟುಂಬಸ್ಥರು 11ನೇ ದಿನದ ಪೂಜಾ ಕ್ರಿಯೆಗಳನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಪುಣ್ಯ ಸ್ಮರಣೆ ಕಾರ್ಯ ಮುಕ್ತಾಯದ ನಂತರ ಪ್ರವೇಶ ನೀಡಲಾಗಿತ್ತು. ನಂತರ ಅಪಾರ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡಿದ್ದರು.
 
ಇಂದು ಅರಮನೆ ಮೈದಾನದಲ್ಲಿ ಪುಣ್ಯ ಸ್ಮರಣೆ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜನೆಯಾಗಿದೆ. ಅಭಿಮಾನಿಗಳಿಗೆ ಮುಕ್ತ ಪ್ರವೇಶವಿರುತ್ತದೆ. ಇದಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. 600 ಮಂದಿ ಬಾಣಸಿಗರು ಅಡುಗೆ ತಯಾರಿಸಲು ಭರದಿಂದ ಸಿದ್ಧತೆ ನಡೆಸುತ್ತಿದ್ದಾರೆ. ಆಹಾರ ತಯಾರಿಸುವ ಜವಾಬ್ದಾರಿಯನ್ನು ಚಾಮರಾಜಪೇಟೆಯ ಡಿ ಎಲ್ ಎಫ್ ಕ್ಯಾಟರಿಂಗ್ ಅವರಿಗೆ ನೀಡಲಾಗಿದೆ.
 
50 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನ ಸಂತರ್ಪಣೆ ಕಾರ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಮಾಂಸಹಾರಿಗಳಿಗೆ, ಸಸ್ಯಾಹಾರಿಗಳಿಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಮಾಂಸಹಾರಿಗಳಿಗಾಗಿ ಅಕ್ಕಿ ಪೇಣಿ ಪಾಯಸ ಚಿಕನ್ ಚಾಪ್ಸ್ ಕಬಾಬ್ ಮೊಟ್ಟೆ ಅನ್ನ ರಸಂ ಗಿರೈಸ್, ಸಸ್ಯಹಾರಿಗಳಿಗಾಗಿ ಅಕ್ಕಿ ಪೇಣಿ ಪಾಯಸ, ಗಿರೈಸ್ ಕುರ್ಮ ಬೇಬಿಕಾರ್ನ್ ಲಾಲಿಪಪ್ ಆಲೂ ಕಬಾಬ್ ಮಸಾಲೆ ವಡೆ ಅನ್ನ ಸಾಂಬಾರ್ ತಯಾರಾಗುತ್ತಿದೆ. ಎಂಟು ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗುತ್ತಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದರೆ ಮತ್ತೆ ಹೆಚ್ಚುವರಿ ಕೌಂಟರ್ ಗಳನ್ನು ತೆರೆಯಲು ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ.
 
ಭದ್ರತೆಗಾಗಿ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಒಂದು ಸಾವಿರ ಪೊಲೀಸರ ತುಕಡಿ ನಿಯೋಜನೆ ಮಾಡಲಾಗಿದೆ. ಗಾಯತ್ರಿ ವಿಹಾರದ ಗೇಟ್ ನಂಬರ್ 4 ರಲ್ಲಿ VIP ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ,  ಕೃಷ್ಣ ವಿಹಾರ್ ಗೇಟ್ ನಂಬರ್ 1 ರಲ್ಲಿ ಸಾರ್ವಜನಿಕರ ಪಾರ್ಕಿಂಗ್ ವ್ಯವಸ್ಥೆ,  ಗೇಟ್ ನಂಬರ್ 2 ಗಾಯತ್ರಿ ವಿಹಾರ್ ಮೂಲಕ ಸಾರ್ವಜನಿಕರಿಗೆ ಎಂಟ್ರಿ  ಗೇಟ್ ನಂಬರ್ 2 ರಲ್ಲಿಯೇ  VIP ಗಳಿಗೆ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ.
 
ಡಿ ಎಲ್ ಎಫ್ ಕ್ಯಾಟರಿಂಗ್ ಸಿಬ್ಬಂದಿಯೇ ರಾಜ್ ಕುಟುಂಬದ ಪ್ರತಿಯೊಂದು ಸಮಾರಂಭದಲ್ಲಿ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದರು. ಪುನೀತ್ ಮದುವೆಯಲ್ಲಿಯೂ ಇವರಿಗೆ ಅಡುಗೆ ಜವಾಬ್ದಾರಿ ವಹಿಸಲಾಗಿತ್ತು. ಕಳೆದ ತಿಂಗಳಷ್ಟೇ ಈ ಸಿಬ್ಬಂದಿಯನ್ನು ಪುನೀತ್ ಮನೆಗೆ ಕರೆಸಿ ಬಾಡೂಟ ಹಾಕಿಸಿದ್ದರು.
 
ಅದನ್ನೆಲ್ಲ ನೆನೆದು ಕಣ್ಣಿರಿಡುತ್ತಲೇ ಅವರು ಅಡುಗೆ ಕಾರ್ಯದ ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿಯೋರ್ವ ಸಿಬ್ಬಂದಿಯಲ್ಲಿಯೂ ಪುನೀತ್ ಬಗ್ಗೆ ಅಪಾರ ಅಭಿಮಾನ. ಅವರ ಸರಳತೆ, ಬಡವ ಬಲ್ಲಿದರೆಂಬ ತಾರತಮ್ಯ ಮಾಡದೇ ತೋರುತ್ತಿದ್ದ ಪ್ರೀತಿ ಗೌರವ ಅಪಾರ ಎನ್ನುತ್ತಾರೆ.
 
ಪುನೀತ್ ಅವರ ಜೊತೆ ಕಳೆದ ಕ್ಷಣಗಳನ್ನು ನೆನೆದು ಕ್ಯಾಟರಿಂಗ್ ವ್ಯವಸ್ಥಾಪಕ ಮಧುಗೌಡ ಕಣ್ಣೀರಾದರು. ಅಷ್ಟು ದೊಡ್ಡ ಕಲಾವಿದರಾದರೂ ಹಮ್ಮುಬಿಮ್ಮು ಇರಲಿಲ್ಲ. ಸ್ನೇಹಿತನಂತೆ ಇರುತ್ತಿದ್ದರು. ಇಂದು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅಡುಗೆ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಗದ್ಗದಿತರಾದರು.

ಸುದ್ದಿ ಓದಿ