ತಿಲಕವಾಡಿ ಪೊಲೀಸ್ ಠಾಣೆ ಮಾರ್ಗದಲ್ಲಿ ಸಾರ್ವಜನಿಕರಲ್ಲಿ ಆತಂಕ; ತಕ್ಷಣ ದುರಸ್ತಿ ಕೈಗೊಳ್ಳಲು ಆಗ್ರಹ
ಲೋಕದರ್ಶನ ವರದಿ
ಬೆಳಗಾವಿ, ಆ. 3: ನಗರದ ಗುರುವಾರ ಪೇಟೆ ಪ್ರದೇಶದಲ್ಲಿ ತಿಲಕವಾಡಿ ಪೊಲೀಸ್ ಠಾಣೆಗೆ ಹೋಗುವ ರಸ್ತೆಯ ತಿರುವಿನಲ್ಲಿರುವ ಸಿಮೆಂಟ್ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಅಳವಡಿಸಲಾಗಿರುವ ಭೂಗತ ವಿದ್ಯುತ್ ಕೇಬಲ್ನಿಂದ ಕಿಡಿಗಳು ಹಾಗೂ ಹೊಗೆ ಹೊರಬರುತ್ತಿರುವ ಘಟನೆ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ನಿರಂತರ ಮಳೆಯಿಂದ ರಸ್ತೆ ಸಂಪೂರ್ಣ ಒದ್ದೆಯಾಗಿರುವ ಹಿನ್ನೆಲೆಯಲ್ಲಿ, ಈ ವಿದ್ಯುತ್ ದೋಷದಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಇತರ ವಾಹನ ಚಾಲಕರಿಗೆ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಇರುವುದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಹೆಸ್ಕಾಂ (ಊಇಖಅಓಒ) ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಭೂಗತ ವಿದ್ಯುತ್ ದೋಷವನ್ನು ಪರೀಶೀಲಿಸಿ ತುರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಬೆಳಗಾವಿ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದ ಮುಖ್ಯಸ್ಥ ಸಂತೋಷ್ ಆರ್. ದಾರೇಕರ್ ಮಾತನಾಡಿ, ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ತಕ್ಷಣ ಸ್ಥಳ ಪರೀಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಸಂಭವನೀಯ ಅಪಾಯವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.