ರಾಣೆಬೆನ್ನೂರ

ಅನ್ನ ಆಶ್ರಯ ದೊರಕಿಸುವುದೇ ಮಾನವೀಯ ಧರ್ಮ: ಶಿವರಾಯ ಪ್ರಭು

ಅನ್ನ ಆಶ್ರಯ ದೊರಕಿಸುವುದೇ ಮಾನವೀಯ ಧರ್ಮ: ಶಿವರಾಯ ಪ್ರಭು

ರಾಣೇಬೆನ್ನೂರು 20: ಗಾಂಧೀಜಿ ಕಂಡ ರಾಮ ರಾಜ್ಯದ  ಕನಸು ನನಸಾಗುವ ನಿಟ್ಟಿನಲ್ಲಿ, ಸರಕಾರ, ಸಂಘ -ಸಂಸ್ಥೆಗಳು ಸಾರ್ವಜನಿಕರು ಮುಂದಾಗಿ ನೋಂದು  ಬೆಂದು, ಬಳಲಿದವರಿಗೆ ಅನ್ನ ಮತ್ತು ಆಶ್ರಯ ದೊರಕಿಸುವುದೇ ನಿಜವಾದ ಮಾನವೀಯ ಧರ್ಮವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ ಶಿವರಾಯ ಪ್ರಭು ಹೇಳಿದರು. ಅವರು ತಾಲೂಕಿನ ಆರೆಮಲ್ಲಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಸರಳ ಕಾರ್ಯಕ್ರಮದಲ್ಲಿ ವಾತ್ಸಲ್ಯ ಕಾಮಗಾರಿ ಅಡಿಯಲ್ಲಿ ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರಿಸಿ,  ಮಾತನಾಡಿದರು. ಅರೇಮಲ್ಲಾಪುರ ವಲಯದ ವಾತ್ಸಲ್ಯ ಕುಟುಂಬದ ಸದಸ್ಯರಾದ ಅಜ್ಜಪ್ಪ ಲಕ್ಷ್ಮಪ್ಪ ಬೀಳಚಿ ಅವರಿಗೆ, ವಾತ್ಸಲ್ಯ ಮನೆ ರಚನೆಯನ್ನು ಶಿವರಾಯ ಪ್ರಭು  ಹಸ್ತಾಂತರಿಸಿ, ಫಲಾನುಭವಿಗೆ ಶುಭ ಹಾರೈಸಿದರು.  

ಇದುವರೆಗೂ ಎರಡನೇ ಹಂತದ ಕಾರ್ಯಕ್ರಮದ ಅಡಿಯಲ್ಲಿ ಹಾವೇರಿ ಜಿಲ್ಲೆಯಾದ್ಯಂತ, ನೀರ್ಗತಿಕರಿಗೆ ಒಟ್ಟು 16 ವಾತ್ಸಲ್ಯ  ಮನೆಗಳನ್ನು ಮಂಜುರಾಗಿವೆ. ಅದರಲ್ಲಿ ಇಂದು 4 ಮನೆಗಳನ್ನು ಮಾತ್ರ ಹಸ್ತಾಂತರಿಸಲಾಗುತ್ತಿದೆ ಎಂದರು. ಸಂಸ್ಥೆಯಲ್ಲಿನ ಸಂಘದ ಸದಸ್ಯರಿಗೆ ಬ್ಯಾಂಕಿನ ಮೂಲಕ ಪ್ರಗತಿ ನಿಧಿ ಸೌಲಭ್ಯ, ಗ್ರಾಮಗಳಲ್ಲಿನ ನಿರ್ಗತಿಕರಿಗೆ ಮಾಸಿಕ 1000 ಸಾವಿರ ರೂ ಮಾಸಾಸನ, ವಾತ್ಸಲ್ಯ ಮಿಕ್ಸ್‌ ಕಿಟ್, ವಿಕಲಚೇತನರಿಗೆ ಸಾಧನ ಸಲಕರಣೆ, ಸಮುದಾಯ ಅಭಿವೃದ್ಧಿ ಅನುದಾನ, ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ಆಯ್ಕೆ, ವೃತ್ತಿಪರ ಶಿಕ್ಷಣ ಪಡೆಯುವ ಆಯ್ದ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಸೇರಿದಂತೆ ಮತ್ತಿತರ ಅನೇಕ ಯೋಜನೆಗಳು, ಗ್ರಾಮಗಳ ಕಲ್ಯಾಣ, ಸದಸ್ಯರ ಅಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.  

ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜಪ್ಪ ಮರಿಯಪ್ಪ ಹಲುವಾಗಲ ಅವರು ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳು ಇಂತಹ ಬಡ ಕುಟುಂಬದ ಅಸಹಾಯಕರಿಗೆ ತುಂಬಾ ಸಹಕಾರಿಯಾಗಿದ್ದು, ವಾತ್ಸಲ್ಯ ಯೋಜನೆ ಧರ್ಮಾಧಿಕಾರಿಗಳ ದೂರದೃಷ್ಟಿಯಾಗಿದೆ, ಅವರ ಈ ಸೇವಾ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ.  ಸರಕಾರ ಮಾಡದಿರುವ ಎಷ್ಟೋ ಕೆಲಸಗಳನ್ನು ಸಂಸ್ಥೆ ಮಾಡುತ್ತಿರುವುದು ಅಭಿನಂದನೀಯವಾಗಿದೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಸದಸ್ಯ ಬುಳ್ಳಪ್ಪ ಬಣಕಾರ, ಒಕ್ಕೂಟದ ಅಧ್ಯಕ ಮಲ್ಲಿಕಾರ್ಜುನ, ಜ್ಞಾನವಿಕಾಸ ಸಮನ್ವಯಾಧಿಕಾರಿ ವೆಂಕಟಮಾಲಾ, ವಲಯ ಮೇಲ್ವಿಚಾರಕ ರಮೇಶ್, ಮನೆ ರಚನೆ ಮಾಡಿದ ಮೇಸ್ತ್ರಿ  ಮಂಜುನಾಥ ವಡ್ಡರ್, ಸೇರಿದಂತೆ ಗ್ರಾಮದ ಗಣ್ಯರು  ವಲಯ ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ