ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ
ಹೊಸಪೇಟೆಯ 22: ಶಂಕರ್ ಆನಂದ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಿ ವಿದ್ಯಾರ್ಥಿಗಳಿಗೆ ಎಲ್ಲಾ ತರಗತಿಗಳನ್ನು ತೆಗೆದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕೆಂದು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು. ನಂತರ ಹೊಸಪೇಟೆ ತಹಶಿಲ್ದಾರರ ಕಛೇರಿಯಲ್ಲಿ ಶಿರಸ್ತೇದಾರರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ರಾಜ್ಯ ಸೆಕ್ರೆಟರಿಯಟ್ ಸಮಿತಿ ಸದಸ್ಯ ಗುರಳ್ಳಿ ರಾಜರವರು ಮಾತನಾಡುತ್ತಾ.., "ಅತಿಥಿ ಉಪನ್ಯಾಸಕರ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು ಅವುಗಳನ್ನು ಕೂಡಲೇ ಈಡೇರಿಸಬೇಕು. ಮತ್ತೊಂದೆಡ ಯಾವುದೇ ಪೂರ್ವ ತಯಾರಿಯಿಲ್ಲದೆ ಎನ್ಈಪಿ-2020 ಹಠಾತ್ ಹೇರಿಕೆಯಿಂದ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಲ್ಲಿ ನೂರೆಂಟು ಗೊಂದಲಗಳು ಸೃಷ್ಟಿಯಾಗಿದ್ದು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗುತ್ತಿಲ್ಲ. ಪದವಿ ಪ್ರಥಮ ಸೆಮಿಸ್ಟರ್ ನಲ್ಲಿ ಯಾವ ವಿಷಯಗಳಿವೆ, ಯಾವ ಪಠ್ಯಕ್ರಮವಿರುತ್ತದೆ, ಪರೀಕ್ಷೆಯ ಪ್ರಶ್ನೆ ಪರ್ತಿಕೆಗಳು ಯಾವ ಮಾದರಿಯಲ್ಲಿರುತ್ತವೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಅದರ ಮದ್ಯದಲ್ಲಿ ಹತ್ತು ದಿನಗಳಿಂದ ತರಗತಿಗಳು ನಡೆಯದಿರುವುದರಿಂದ ಜ್ಞಾನಾರ್ಜನೆಗೆ ಧಕ್ಕೆಯಾಗಿದ್ದು ಪರೀಕ್ಷೆಗಳನ್ನು ಎದುರಿಸುದು ಹೇಗೆ? ಎಂಬ ಆತಂಕ ಸೃಷ್ಟಿಯಾಗಿದೆ" ಎಂದು ತಿಳಿಸಿದರು.
ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಐಡಿಎಸ್ಓ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ರವಿಕಿರಣ್ ಜೆ ಪಿ ರವರು.., "ರಾಜ್ಯದಲ್ಲಿ 14,000 ಅತಿಥಿ ಉಪನ್ಯಾಸಕರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ 15-20 ವರ್ಷಗಳಿಂದ ಕಾರ್ಯನಿರ್ವಾಹಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಅವರಿಗೆ ಯಾವುದೇ ತರದ ಉದ್ಯೋಗ ಭದ್ರತೆ ಒದಗಿಸದೇ ಅತ್ಯಂತ ಕಡಿಮೆ ಸಂಬಳ ನೀಡುತ್ತಿದೆ. ಸರ್ಕಾರ ನೀಡುವ ಸಂಬಳದಿಂದ ದುಬಾರಿ ಬೆಲೆ ಏರಿಕೆಯ ಈ ದಿನಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಆದ್ದರಿಂದ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈ ಕೂಡಲೇ ಈಡೆೇರಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ನಾಗರಾಜ, ಹನುಮೇಶ, ರಾಜಾಭಕ್ಷಿ ಮತ್ತಿತರರು ಭಾಗಿಯಾಗಿದ್ದರು.