ಹೊಸಪೇಟೆ

ಠೇವಣಿ ಹಣ ಬಡ್ಡಿ ಸಮೇತ ತ್ವರಿತ ವಾಪಸಾತಿಗಾಗಿ ಪ್ರತಿಭಟನೆ

ಠೇವಣಿ ಹಣ ಬಡ್ಡಿ ಸಮೇತ ತ್ವರಿತ ವಾಪಸಾತಿಗಾಗಿ ಪ್ರತಿಭಟನೆ

ಹೊಸಪೇಟೆ 02: ನಗರದ ಅಮರಾವತಿಯಲ್ಲಿರುವ ಅಹನ ಸೌಹಾರ್ದ ಪತ್ತಿನ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ, ಅಸಲು ಮತ್ತು ಬಡ್ಡಿ ಸೌಲಭ್ಯದಿಂದ ವಂಚಿತರಾಗಿರುವ ನೊಂದ ಠೇವಣಿದಾರರು ಇಂದು ಸಹಾಯಕ ಆಯುಕ್ತರ ಆವರಣದಲ್ಲಿ ಸಭೆ ಸೇರಿ ತಮ್ಮ ಠೇವಣಿ ಹಣ ಬಡ್ಡಿ ಸಮೇತ ತ್ವರಿತ ವಾಪಸಾತಿಗಾಗಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು.  

ಈ ಸಂದರ್ಭದಲ್ಲಿ ಠೇವಣಿದಾರರ ಸಂಘಟನೆಯ ಸಂಚಾಲಕ ವೈ. ಯಮುನೇಶ್‌ರವರು ಮಾತನಾಡಿ ಅಹನಾ ಬ್ಯಾಂಕಿನಲ್ಲಿ ಠೇವಣಿ ಹಣ ಇಟ್ಟಿರುವ ಗ್ರಾಹಕರು ಕಳೆದ 3-4 ವರ್ಷಗಳಿಂದ ತಮ್ಮ ಠೇವಣಿ ಹಣ ಮತ್ತು ಬಡ್ಡಿ ಮರುಪಾವತಿಗಾಗಿ ಇಲಾಖೆಯ ಅಧಿಕಾರಿಗಳಿಗೆ ಬ್ಯಾಂಕಿನ ನಿರ್ದೇಶಿತ ಮಂಡಳಿಗೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ನಿವೃತ್ತ ನೌಕರರು, ಮಧ್ಯಮ ವರ್ಗ ಹಾಗೂ ಜೀವನಕ್ಕೆ ಬೇರೆ ಆದಾಯ ಇಲ್ಲದವರು ತಾವು ಕಷ್ಟ ಪಟ್ಟು ಗಳಿಸಿದ ಹಣವನ್ನು ಸದ್ರಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದು, ತಮ್ಮ ವೃದ್ಧಾಪ್ಯ ಹಾಗೂ ಕಷ್ಠಕಾಲದಲ್ಲಿ ಮಕ್ಕಳ ವಿದ್ಯಬ್ಯಾಸ, ಮದುವೆ, ಮನೆ ಕಟ್ಟಲು ಹಣಹೂಡಿಕೆ ಉದ್ದೇಶದಿಂದ ಠೇವಣಿ ಇಟ್ಟಿದ್ದು. ಬ್ಯಾಂಕಿನ ಆಡಳಿತ ಮಂಡಳಿಯವರು ಠೇವಣಿ ಹಣವನ್ನು ಅವ್ಯವಹಾರ ಮಾಡಿರುವುದರಿಂದ ನೂರಾರು ಕುಟುಂಬಗಳು ಬೀದಿಪಾಲಾಗಿದ್ದಾರೆ.  

ಈಗಾಗಲೇ ಬ್ಯಾಂಕಿನ ಅವ್ಯವಹಾರದ ವಿರುದ್ಧ ಧಾರವಾಡ ಹೈಕೋರ್ಟ್‌ ಪೀಠದಲ್ಲಿ ಮೊಕ್ಕದ್ದಮೆ ದಾಖಲಾಗಿದೆ. ತಡವಾಗಿಯಾದರೂ ಸರ್ಕಾರ ಠೇವಣಿದಾರರಿಗೆ ನ್ಯಾಯ ಕೊಡುತ್ತೆ ಎಂಬ ಆಶಾ ಭಾವನೆ ಮೂಡಿದ್ದು, ಈ ನಿಟ್ಟಿನಲ್ಲಿ ಹೊಸಪೇಟೆಯ ಸಹಾಯಕ ಆಯುಕ್ತರ ಕಛೇರಿಯಲ್ಲಿ ಠೇವಣಿದಾರರ ಹಣದ ವಿವರಗಳನ್ನು ಪಡೆಯಲಾಗುತ್ತಿದೆ.  

ನವೆಂಬರ್ 7ನೇ ತಾರೀಖಿನಿಂದ ಈ ಪ್ರಕ್ರಿಯೆ ಆರಂಭವಾಗಿದ್ದು ಡಿಸೆಂಬರ್ 6ನೇ ತಾರೀಖಿನ ಒಳಗಾಗಿ ನೊಂದ ಠೇವಣಿದಾರರು ತಮ್ಮ ಅಸಲು ಮತ್ತು ಬಡ್ಡಿಯ ವಿವರಗಳನ್ನು ನಿಗದಿತ ಅರ್ಜಿಯಲ್ಲಿ ತುಂಬಿ ಸಹಾಯಕ ಆಯುಕ್ತರ ಕಾರ್ಯಾಲದಲ್ಲಿ ಸಲ್ಲಿಸಬೇಕು. ಆಧಾರ್‌ಕಾರ್ಡ್‌, ಪಾನ್‌ಕಾರ್ಡ್‌, ಠೇವಣಿ ರಶೀದಿ, ಬ್ಯಾಂಕ್ ಪಾಸ್ ಮೂಲ ಪ್ರತಿ, ಹಾಗೂ ಜೆರಾಕ್ಸ್‌ ಪ್ರತಿಗಳನ್ನು ಕಛೇರಿಯಲ್ಲಿ ತೋರಿಸಿ ಅರ್ಜಿ ಪಡೆದು ಠೇವಣಿಯ ವಿವರಗಳನ್ನು ಸಲ್ಲಿಸಬೇಕು. ನಿಗಧಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸುವ ಠೇವಣಿದಾರರಿಗೆ ಮಾತ್ರ ಠೇವಣಿ ಹಣ ವಾಪಾಸಾಗುತ್ತದೆ.  

ಅಹನಾ ಸೌಹಾರ್ದ ಬ್ಯಾಂಕಿನ ಠೇವಣಿದಾರರ ಹಿತರಕ್ಷಣ ಸಮಿತಿಯ ಸಂಚಾಲಕರಾದ ವೈ.ಯಮುನೇಶ್, ಅಧ್ಯಕ್ಷರಾದ ಪಾಂಡುರಂಗರಾವ್, ಉಪಾಧ್ಯಕ್ಷರಾದ ಶ್ರೀಧರ್, ಕಾರ್ಯದರ್ಶಿ ಹೆಚ್‌.ರಾಮೇಶ್ವರ್, ಜಂಟಿ ಕಾರ್ಯದರ್ಶಿ ಎಸ್‌.ವೆಂಕಟೇಶ್, ಖಜಾಂಚಿ ಎಸ್‌.ಶ್ರೀನಿವಾಸ್ ಹಾಗೂ ಅಸಂಖ್ಯಾತ ಠೇವಣಿದಾರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ